

ನವದೆಹಲಿ: ದಾಸ್ತಾನುದಾರರು, ಆಭರಣ ತಯಾರಕರಿಂದ ಹೆಚ್ಚಿದ ಖರೀದಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ದುರ್ಬಲಗೊಂಡ ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಗುರುವಾರ 200 ರೂ.ನಷ್ಟು ಏರಿಕೆಯಾಗಿದೆ.
ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಬುಧವಾರ 99,200 ರೂ. ಇದ್ದದ್ದು ಗುರುವಾರ 99,400 ರೂ. ಆಗಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನ ಬುಧವಾರ 98,700 ರೂ. ಇದ್ದದ್ದು ಗುರುವಾರ 98,900 ರೂ. ಆಗಿದೆ. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರ ಇನ್ನಷ್ಟು ಕಾಲ ಮುಂದುವರಿಯಲಿದೆ ಎಂದು ಅಮೆರಿಕದ ವಿತ್ತ ಸಚಿವ ಸ್ಕಾಟ್ ಬೆಸೆಂಟ್ ಹೇಳಿಕೆ ನೀಡಿದ್ದರು. ಇದಲ್ಲದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇನ್ನು 2-3 ವಾರಗಳ ಬಳಿಕ ಚೀನಾ ಮೇಲೆ ಮತ್ತಷ್ಟು ತೆರಿಗೆ ವಿಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಇದರಿಂದಾಗಿ ಸುರಕ್ಷಿತ ಹೂಡಿಕೆ ಎಂದೇ ಪರಿಗಣಿಸಲಾದ ಚಿನ್ನದ ದರದಲ್ಲಿ ಸ್ವಲ್ಪ ಏರಿಕೆ ಕಂಡಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಈ ಮಧ್ಯೆ, ಬೆಳ್ಳಿಯ ಬೆಲೆ ಗುರುವಾರ 700 ರೂ.ನಷ್ಟು ಏರಿಕೆಯಾಗಿ, ಕೆಜಿಗೆ 99,900 ರೂ.ಗೆ ತಲುಪಿದೆ. ಬುಧವಾರ ಇದು - 99,200 ರೂ. ಇತ್ತು.