

ನವದೆಹಲಿ: ಸಾಗರೋತ್ತರ ಮಾರುಕಟ್ಟೆಗಳಲ್ಲಿನ ಪ್ರಬಲ ಪ್ರವೃತ್ತಿಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಚಿನ್ನದ ಬೆಲೆ 365 ರೂ. ಹೆಚ್ಚಳವಾಗಿದೆ. ಬುಧವಾರ 10 ಗ್ರಾಂಗೆ 90,685 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಗುರುವಾರ 91,050 ರೂ.ಗೆ ತಲುಪಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನ ಬುಧವಾರ 90,235 ರೂ. ಇದ್ದದ್ದು ಗುರುವಾರ 90,600 ರೂ.ಗೆ ಏರಿದೆ. ಬೆಳ್ಳಿ ದರ ಬುಧವಾರ 1,01,500 ರೂ. ಇದ್ದದ್ದು 200 ರೂ. ಏರಿಕೆಯಾಗಿ 1,01,700 ರೂ.ಗೆ ತಲುಪಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.
ಮುಂಬೈ: ವಿದೇಶಿ ಹೂಡಿಕೆ ಒಳಹರಿವಿನ ಹೆಚ್ಚಳದ ಜೊತೆಗೆ ಎಚ್ಡಿಎಫ್ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಎಲ್ ಆಂಡ್ ಟಿ ಮತ್ತು ಬಜಾಜ್ ಫೈನಾನ್ಸ್ ಷೇರುಗಳ ಖರೀದಿ ಭರಾಟೆಯಿಂದಾಗಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 318 ಅಂಕ ಏರಿಕೆ ದಾಖಲಿಸಿದೆ. ದಿನದ ವಹಿವಾಟಿನ ನಡುವೆ 458 ಅಂಕ ಏರಿಕೆಯಾಗಿ 77,747ಕ್ಕೆ ತಲುಪಿದ್ದ ಸೆನ್ಸೆಕ್ಸ್ ಕೊನೆಯಲ್ಲಿ 317.93 ಅಂಕ ಏರಿಕೆ ದಾಖಲಿಸಿ 77,606ಕ್ಕೆ ಸ್ಥಿರವಾಯಿತು. ನಿಫ್ಟಿ 105 ಅಂಕ ಹೆಚ್ಚಳವಾಗಿ 23,591ಕ್ಕೆ ಸ್ಥಿರಗೊಂಡಿತು. ಆಮದು ಕಾರುಗಳ ಮೇಲೆ ಶೇಕಡ 25 ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೊಷಿಸಿದ ಹಿನ್ನೆಲೆಯಲ್ಲಿ ಟಾಟಾ ಮೋಟರ್ಸ್ ಷೇರುಗಳ ಬೆಲೆ ಶೇ. 5.5ರಷ್ಟು ಭಾರಿ ಕುಸಿತ ಕಂಡಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ 2,240 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.