

ನವದೆಹಲಿ: ದಾಸ್ತಾನುದಾರರು ಮತ್ತು ಆಭರಣ ಮಾರಾಟಗಾರರ ನಿರಂತರ ಖರೀದಿ ಭರಾಟೆಯಿಂದಾಗಿ ಬಂಗಾರದ ಬೆಲೆ ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ 2 ಸಾವಿರ ರೂ.ನಷ್ಟು ಏರಿಕೆಯಾಗಿ ಮತ್ತೊಂದು ದಾಖಲೆ ಸೃಷ್ಟಿಸಿದೆ.
ಶುಕ್ರವಾರ 10 ಗ್ರಾಂಗೆ 92,150 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಮಂಗಳವಾರ 94,150 ರೂ.ಗೆ ಏರಿದೆ. ಷೇರು ಮಾರುಕಟ್ಟೆ ಸತತವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷಿತ ಹೂಡಿಕೆಯಾದ ಬಂಗಾರದತ್ತ ಹೂಡಿಕೆದಾರರ ಚಿತ್ತ ನೆಟ್ಟಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಶುಕ್ರವಾರ 91,700 ರೂ. ಇದ್ದದ್ದು ಮಂಗಳವಾರ 93,700 ರೂ.ಗೆ ಏರಿದೆ. ಈ ಹಿಂದೆ ಫೆ. 10ರಂದು ಚಿನ್ನದ ಬೆಲೆ ಒಮ್ಮೆಲೇ 2,400 ರೂ.ನಷ್ಟು ಹೆಚ್ಚಳವಾಗಿತ್ತು.
ಈ ವರ್ಷ ಇದುವರೆಗೆ (ಜ. 1ರಿಂದ ಏ.1ರವರೆಗೆ) ಹಳದಿ ಲೋಹದ ಬೆಲೆ 14,760 ರೂ. (ಶೇ. 18.6ರಷ್ಟು) ಹೆಚ್ಚಾಗಿದೆ. ಈ ಮಧ್ಯೆ, ಬೆಳ್ಳಿಯ ದರ ಶುಕ್ರವಾರ 500 ರೂ.ನಷ್ಟು ಇಳಿದಿದೆ. ಶುಕ್ರವಾರ ಕೆಜಿಗೆ 1,03,000 ರೂ. ಇದ್ದದ್ದು ಮಂಗಳವಾರ 1,02,500 ರೂ. ಆಗಿದೆ. ಈದ್ ಉಲ್ ಫಿತ್ರ್ ಅಂಗವಾಗಿ ಚಿನ್ನಬೆಳ್ಳಿ ಮಾರುಕಟ್ಟೆಗೆ ಸೋಮವಾರ ರಜೆ ಇತ್ತು.