Gold Price Hike: ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಮುನ್ಸೂಚನೆ ನೀಡಿದ ರಾಬರ್ಟ್ ಕಿಯೋಸಾಕಿ!

Gold Price Hike
Gold Price Hike
Published on
ನವದೆಹಲಿ: ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಮಹಾ ಕುಸಿತ (Market Crash) ಸಂಭವಿಸಲಿದೆ ಎಂದು ಜಗತ್ಪ್ರಸಿದ್ಧ ಬಿಜಿನೆಸ್ ಪುಸ್ತಕ "ರಿಚ್ ಡ್ಯಾಡ್ ಪೂರ್ ಡ್ಯಾಡ್" ಲೇಖಕ ರಾಬರ್ಟ್ ಕಿಯೋಸಾಕಿ ಭವಿಷ್ಯ ನುಡಿದಿದ್ದಾರೆ. ಈ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಅತಿ ಬಾಹ್ಯಾಕಾಶದ ಮಟ್ಟಕ್ಕೆ ಜಿಗಿಯಲಿವೆ ಎಂದು ಅವರು ಆತಂಕಕಾರಿ ಮುನ್ಸೂಚನೆ ನೀಡಿದ್ದಾರೆ.
ತಮ್ಮ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೂಡಿಕೆದಾರರನ್ನು ಎಚ್ಚರಿಸಿರುವ ಕಿಯೋಸಾಕಿ, ಪ್ರಸಿದ್ಧ ಮಾರುಕಟ್ಟೆ ವಿಶ್ಲೇಷಕ ಜಿಮ್ ರಿಕಾರ್ಡ್ಸ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಭವಿಷ್ಯದಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ ಬರೋಬ್ಬರಿ $100,000 (ಅಂದಾಜು 83 ಲಕ್ಷ ರೂ.) ತಲುಪಲಿದೆ ಎಂದಿದ್ದಾರೆ. ಹಾಗೆಯೇ ಬೆಳ್ಳಿಯ ಬೆಲೆಯೂ ಕೂಡ ಪ್ರತಿ ಔನ್ಸ್‌ಗೆ $200 (ಅಂದಾಜು 16,500 ರೂ.) ದಾಟುವ ಮೂಲಕ ಸಾರ್ವಕಾಲಿಕ ದಾಖಲೆ ಬರೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಜಾಗತಿಕ ಸಾಲದ ಸುಳಿಗೆ ಸಿಲುಕಿದ ದೇಶಗಳು

ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವಬ್ಯಾಂಕ್‌ನ ಇತ್ತೀಚಿನ ವರದಿಗಳ ಪ್ರಕಾರ, ಪ್ರಸ್ತುತ ಇಡೀ ಜಗತ್ತಿನ ಒಟ್ಟು ಸರ್ಕಾರಿ ಸಾಲವು $100 ಟ್ರಿಲಿಯನ್ ದಾಟಿದೆ. ಇದು ಜಾಗತಿಕ ಜಿಡಿಪಿಯ (GDP) ಸರಿಸುಮಾರು 94% ರಷ್ಟಾಗಿದೆ. ಅಮೆರಿಕ, ಜಪಾನ್, ಸುಡಾನ್ ಮತ್ತು ಸಿಂಗಾಪುರದಂತಹ ದೊಡ್ಡ ದೇಶಗಳೇ ಭಾರಿ ಸಾಲದ ಹೊರೆಯಿಂದ ಕಂಗಾಲಾಗಿವೆ.
ಆದರೆ, ಕಿಯೋಸಾಕಿ ಅವರ ಈ ಭೀತಿ ಹುಟ್ಟಿಸುವ ಭವಿಷ್ಯವಾಣಿಯನ್ನು ಕೆಲವು ಮಾರುಕಟ್ಟೆ ತಜ್ಞರು ಟೀಕಿಸಿದ್ದಾರೆ. ಕಿಯೋಸಾಕಿ ಅವರು ವರ್ಷಗಳಿಂದಲೂ ಇದೇ ರೀತಿ ಮಾರುಕಟ್ಟೆ ಕುಸಿತದ ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ ಎಂದು ಅವರು ನೆನಪಿಸಿದ್ದಾರೆ. ಆದಾಗ್ಯೂ, ಪ್ರಸ್ತುತ ಜಾಗತಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸದ್ಯಕ್ಕಂತೂ ಏರುಗತಿಯಲ್ಲಿಯೇ ಇರಲಿವೆ ಎಂಬುದನ್ನು ಬಹುತೇಕ ತಜ್ಞರು ಒಪ್ಪಿಕೊಂಡಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net