

ನವದೆಹಲಿ: ದುರ್ಬಲ ಜಾಗತಿಕ ಪ್ರವೃತ್ತಿ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಗುರುವಾರ ಐನೂರು ರೂ.ನಷ್ಟು ಇಳಿದಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ದರ 10 ಗ್ರಾಂಗೆ 98,500 ರೂ. ಆಗಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ 98 ಸಾವಿರ ರೂ. ಆಗಿದೆ. ಬೆಳ್ಳಿ ದರದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಸ್ಥಳೀಯ ಮಾರುಕಟ್ಟೆಗಳಲ್ಲಿ ಅದರ ಬೆಲೆ ಕೆಜಿಗೆ 1 ಲಕ್ಷ ರೂ. ಇದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.
ಮುಂಬೈ: ಎರಡು ದಿನಗಳ ಸತತ ಇಳಿಕೆಯ ಬಳಿಕ ಭಾರತೀಯ ಷೇರುಪೇಟೆ ಗುರುವಾರ ಪುಟಿದೆದ್ದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರಸ್ಪರ ಸುಂಕಕ್ಕೆ ಅಲ್ಲಿನ ನ್ಯಾಯಾಲಯ ತಡೆಯೊಡ್ಡಿದ್ದು ಜಾಗತಿಕ ಷೇರು ಮಾರುಕಟ್ಟೆಯ ಏರಿಕೆಗೆ ಕಾರಣವಾಗಿದೆ. ದಿನದ ವಹಿವಾಟಿನ ಮಧ್ಯೆ 504 ಅಂಕ ಏರಿಕೆಯಾಗಿ 81,816ಕ್ಕೆ ತಲುಪಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 320 ಅಂಕ ಏರಿಕೆ ದಾಖಲಿಸಿ 81,633ಕ್ಕೆ ಸ್ಥಿರವಾಯಿತು. ನಿಫ್ಟಿ ಕೂಡ 81 ಅಂಕ ಹೆಚ್ಚಳವಾಗಿ 24,833ಕ್ಕೆ ಸ್ಥಿರಗೊಂಡಿತು. ಇಂಡಸ್ಇಂಡ್ ಬ್ಯಾಂಕ್ನ ಮಾಜಿ ಸಿಇಒ ಸುಮಂತ್ ಮತ್ತು ಇತರ ನಾಲ್ವರನ್ನು ಷೇರು ಮಾರುಕಟ್ಟೆಯಿಂದ ಸೆಬಿ ನಿಷೇಧಿಸಿದ್ದರ ಪರಿಣಾಮ ಆ ಬ್ಯಾಂಕಿನ ಷೇರುಗಳ ಮೌಲ್ಯ ಗುರುವಾರ ಶೇ. 2.41ರಷ್ಟು ಏರಿಕೆಯಾಯಿತು. ಏಷ್ಯಾ ಮತ್ತು ಯೂರೋಪಿಯನ್ ಮಾರುಕಟ್ಟೆಗಳೂ ಏರಿಕೆ ದಾಖಲಿಸಿದವು.