

ನವದೆಹಲಿ: ಕಳೆದ ಐದು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಏರುತ್ತಲೇ ಇದ್ದ ಚಿನ್ನದ ಬೆಲೆ ಶುಕ್ರವಾರ 1,350 ರೂ. ಇಳಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದುರ್ಬಲ ಪ್ರವೃತ್ತಿಯೇ ಇದಕ್ಕೆ ಕಾರಣ ಎನ್ನಲಾಗಿದೆ. ಗುರುವಾರ 10 ಗ್ರಾಂಗೆ 94,350 ರೂ.ಗೆ ಏರಿಕೆಯಾಗಿ ಹೊಸ ದಾಖಲೆ ಸೃಷ್ಟಿಸಿದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಶುಕ್ರವಾರ 93 ಸಾವಿರ ರೂ.ಗೆ ಇಳಿಯಿತು. ಶೇ. 99.5ರಷ್ಟು ಶುದ್ಧತೆಯ ಚಿನ್ನ 93,900 ರೂ. ಇದ್ದದ್ದು 92,550 ರೂ.ಗೆ ಇಳಿಯಿತು. ಬೆಳ್ಳಿಯ ಬೆಲೆಯೂ ಒಮ್ಮೆಲೇ 5 ಸಾವಿರ ರೂ.ನಷ್ಟು ಇಳಿಕೆಯಾಗಿದೆ. ಕಳೆದ ನಾಲ್ಕು ತಿಂಗಳಲ್ಲೇ ಇದು ಗರಿಷ್ಠ ಇಳಿಕೆ. ಗುರುವಾರ ಕೆಜಿಗೆ 1,00,500 ರೂ. ಇದ್ದ ಬೆಳ್ಳಿ ಶುಕ್ರವಾರ 95,500 ರೂ. ಆಗಿತ್ತು.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಪಾರಸ್ಪರಿಕ ತೆರಿಗೆ’ ಘೊಷಣೆ ಮಾಡಿದ್ದರಿಂದ ಜಗತ್ತಿನ ಐನೂರು ಮಂದಿ ಅತಿಶ್ರೀಮಂತರ ಒಟ್ಟಾರೆ ಸಂಪತ್ತಿನಲ್ಲಿ 208 ಶತಕೋಟಿ ಡಾಲರ್ ಸಂಪತ್ತು ಕರಗಿಹೋಗಿದೆ. ಇದು ಕಳೆದ ಒಂದು ದಶಕದಲ್ಲೇ ಅವರಿಗೆ ಆಗಿರುವ ಅತಿ ದೊಡ್ಡ ನಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಪೈಕಿ ಅಮೆರಿಕದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅತಿ ಹೆಚ್ಚು ನಷ್ಟ ಅನುಭವಿಸಿದವರು ಫೇಸ್ಬುಕ್ ಮತ್ತು ಮೆಟಾ ಸ್ಥಾಪಕ ಮಾರ್ಕ್ ಜುಕರ್ಬರ್ಗ್. ಅವರು 17.9 ಶತಕೋಟಿ ಡಾಲರ್ ಕಳೆದುಕೊಂಡಿದ್ದು, ಇದು ಅವರ ಒಟ್ಟು ಸಂಪತ್ತಿನ ಶೇಕಡ 9ರಷ್ಟಾಗಿದೆ. ಅಮೆಜಾನ್ನ ಜೆಫ್ ಬೆಜೋಸ್ 15.9 ಶತಕೋಟಿ ಡಾಲರ್, ಎಲಾನ್ ಮಸ್ಕ್ 11 ಶತಕೋಟಿ ಡಾಲರ್, ಮೈಕೇಲ್ ಡೆಲ್ 9.53 ಶತಕೋಟಿ ಡಾಲರ್ ಕಳೆದುಕೊಂಡಿದ್ದಾರೆ. ಅಮೆರಿಕದಿಂದ ಹೊರಗಿನ ಬಿಲಿಯನೇರ್ಗಳ ಪೈಕಿ ಒಬ್ಬರು ಮಾತ್ರ ನಷ್ಟ ಅನುಭವಿಸಿದ್ದು, ಅವರು ಫ್ರಾನ್ಸ್ನ ಬರ್ನಾರ್ಡ್ ಅರ್ನಾಲ್ಟ್.