

ನವದೆಹಲಿ: ಆಭರಣ ತಯಾರಕರು ಮತ್ತು ದಾಸ್ತಾನುದಾರರಿಂದ ಹೆಚ್ಚಿದ ಮಾರಾಟ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದುರ್ಬಲ ಪ್ರವೃತ್ತಿ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ 1,550 ರೂ. ಇಳಿಕೆಯಾಗಿದೆ.
ಶುಕ್ರವಾರ 10 ಗ್ರಾಂಗೆ 93 ಸಾವಿರ ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಸೋಮವಾರ 91,450 ರೂ.ಗೆ ಇಳಿದಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಶುಕ್ರವಾರ 92,550 ರೂ. ಇದ್ದದ್ದು ಸೋಮವಾರ 91 ಸಾವಿರ ರೂ. ಆಗಿದೆ.
ಚಿನ್ನದ ಬೆಲೆ ಕುಸಿಯುತ್ತಿರುವುದು ಇದು ಸತತ ಐದನೇ ದಿನವಾಗಿದೆ. ಬೆಳ್ಳಿಯ ದರ ಕೂಡ ಸೋಮವಾರ 3 ಸಾವಿರ ರೂ.ನಷ್ಟು ಕುಸಿದಿದೆ. ಶುಕ್ರವಾರ ಕೆಜಿಗೆ 95,500 ರೂ. ಇದ್ದದ್ದು ಸೋಮವಾರ 92,500 ರೂ. ಆಗಿದೆ. ಕಳೆದ ಐದು ದಿನಗಳಲ್ಲಿ ಬೆಳ್ಳಿಯ ಬೆಲೆ 10,500 ರೂ.ನಷ್ಟು ಕೆಳಗಿಳಿದಿದೆ.