ಚಿನ್ನ 500 ರೂ, ಬೆಳ್ಳಿ 1,000 ಇಳಿಕೆ

untitled-design-5-6887bc3c33637
Published on

ನವದೆಹಲಿ: ಚಿನ್ನದ ಬೆಲೆ ಸತತ ನಾಲ್ಕನೇ ದಿನವೂ ಕುಸಿದಿದೆ. ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಬಂಗಾರದ ಬೆಲೆ 500 ರೂ. ಕಡಿಮೆಯಾಗಿದೆ. ಶನಿವಾರ 600 ರೂ. ಕಡಿಮೆಯಾಗಿ 10 ಗ್ರಾಂಗೆ 98,520 ರೂ. ತಲುಪಿದ್ದ ಶೇ. 99.9 ಶುದ್ಧತೆಯ ಚಿನ್ನ ಸೋಮವಾರ 98,020 ರೂ.ಗೆ ಇಳಿದಿದೆ. 98,250 ರೂ. ಇದ್ದ ಶೇ. 99.5ರಷ್ಟು ಶುದ್ಧತೆಯ ಚಿನ್ನ 97,750 ರೂ.ಗೆ ಇಳಿದಿದೆ. ಬೆಳ್ಳಿ ಬೆಲೆ ಸೋಮವಾರ 1,000 ರೂ. ಕಡಿಮೆಯಾಗಿ ಕೆಜಿಗೆ 1,13,000 ರೂ.ಗೆ ತಲುಪಿದೆ. ಇದು ಶನಿವಾರ 1,14,000 ರೂ. ಇತ್ತು ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.

ಷೇರುಪೇಟೆ ಮತ್ತಷ್ಟು ಕೆಳಕ್ಕೆ

ಭಾರತೀಯ ಷೇರುಪೇಟೆ ಸತತ ಮೂರನೇ ಕೆಲಸದ ದಿನವಾದ ಸೋಮವಾರವೂ ಕುಸಿದಿದೆ. ದಿನದ ವಹಿವಾಟಿನ ಮಧ್ಯೆ 686.65 ಅಂಕ ಕುಸಿದು 80,776.44ಕ್ಕೆ ತಲುಪಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 572.07 ಅಂಕ ಇಳಿದು 80,891.02ಕ್ಕೆ ಸ್ಥಿರವಾಯಿತು. ನಿಫ್ಟಿ 156.10 ಅಂಕ ಕುಸಿದು ಎರಡು ತಿಂಗಳ ಕನಿಷ್ಠ ಮಟ್ಟವಾದ 24,680.90ಕ್ಕೆ ಸ್ಥಿರಗೊಂಡಿತು.

ವಿವಿಧ ಕಂಪನಿಗಳ ಕಳಪೆ ತ್ರೖೆಮಾಸಿಕ ಫಲಿತಾಂಶಗಳು, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ನಿರಂತರ ಷೇರು ಮಾರಾಟ, ಇನ್ನೂ ಅಂತಿಮಗೊಳ್ಳದ ಭಾರತ-ಅಮೆರಿಕ ವಾಣಿಜ್ಯ ಒಪ್ಪಂದ ಮುಂತಾದವು ಈ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಕೋಟಕ್ ಮಹೀಂದ್ರ ಬ್ಯಾಂಕ್ ಷೇರು ಶೇ. 7.31ರಷ್ಟು, ಬಜಾಜ್ ಫೈನಾನ್ಸ್ ಶೇ. 3.64ರಷ್ಟು ಭಾರತಿ ಏರ್​ಟೆಲ್ ಶೇ. 2.35ರಷ್ಟು, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಶೇ. 1.76ರಷ್ಟು ಕುಸಿತ ಕಂಡವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ 1,979.96 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net