

ನವದೆಹಲಿ: ದಾಸ್ತಾನುದಾರರು ನಿರಂತರ ಮಾರಾಟಕ್ಕಿಳಿದ ಪರಿಣಾಮ ಚಿನ್ನದ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ 500 ರೂ.ನಷ್ಟು ಕಡಿಮೆಯಾಗಿದೆ. ಮಂಗಳವಾರ 10 ಗ್ರಾಂಗೆ 99,370 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಬುಧವಾರ 98,870 ರೂ.ಗೆ ತಲುಪಿತು. ಶೇ. 99.5 ಶುದ್ಧತೆಯ ಚಿನ್ನ ಬುಧವಾರ 400 ರೂ. ಇಳಿಕೆಯಾಗಿ 10 ಗ್ರಾಂಗೆ 98,400 ರೂ.ಗೆ ತಲುಪಿತು. ಮಂಗಳವಾರ ಇದು 98,800 ರೂ. ಇತ್ತು. ಬೆಳ್ಳಿ ಬೆಲೆ ಬುಧವಾರ 1,000 ರೂ. ಇಳಿಕೆಯಾಗಿ ಕೆಜಿಗೆ 1,11,000 ರೂ.ಗೆ ತಲುಪಿತು. ಮಂಗಳವಾರ ಇದು 1,12,000 ರೂ. ಇತ್ತು.
ಷೇರು ಪೇಟೆ ಅಲ್ಪ ಏರಿಕೆ
ಮುಂಬೈ: ಜಾಗತಿಕ ಮಾರುಕಟ್ಟೆಯ ದುರ್ಬಲ ಪ್ರವೃತ್ತಿ ಪರಿಣಾಮ, ಬುಧವಾರ ಭಾರತೀಯ ಷೇರು ಪೇಟೆಯ ಎರಡೂ ಸೂಚ್ಯಂಕ ಅಲ್ಪ ಏರಿಕೆಯೊಂದಿಗೆ ಮುಕ್ತಾಯಗೊಂಡವು. ದಿನದ ವಹಿವಾಟಿನ ಮಧ್ಯೆ 82,784.75 ರ ಗರಿಷ್ಠ ಮಟ್ಟ ಮತ್ತು 82,342.94 ರ ಕನಿಷ್ಠ ಮಟ್ಟವನ್ನು ತಲುಪಿದ ಸೆನ್ಸೆಕ್ಸ್ 63.57 ಅಂಕ ಏರಿಕೆ ಯೊಂದಿಗೆ 82,634.48ಕ್ಕೆ ಸ್ಥಿರಗೊಂಡಿತು. ನಿಫ್ಟಿ 16.25 ಅಂಕ ಏರಿಕೆಯೊಂದಿಗೆ 25,212.05ಕ್ಕೆ ಮುಕ್ತಾಯಗೊಂಡಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ 120.47 ಕೋಟಿ ರೂ.ಗಳ ಷೇರುಗಳನ್ನು ಖರೀದಿಸಿದ್ದಾರೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಶೇ. 0.26ರಷ್ಟು ಕಡಿಮೆಯಾಗಿ ಬ್ಯಾರೆಲ್ಗೆ 68.55 ಡಾಲರ್ಗೆ ಇಳಿಯಿತು.