

ಶಿರಸಿ: ತಾಲೂಕಿನ ಹೀಪನಳ್ಳಿ ಸಂಕದ ಮನೆಯಲ್ಲಿ ದೀಪಾವಳಿ ದಿನ ಕಾಣೆಯಾದ ಬಂಗಾರದ ಸರವನ್ನು ಆಕಳ ಹೊಟ್ಟೆಯಲ್ಲಿ ಪತ್ತೆ ಹಚ್ಚಲಾಗಿದೆ. ಬುಧವಾರ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆಯಲಾಗಿದೆ.
ಇಲ್ಲಿನ ಶ್ರೀಕಾಂತ ಹೆಗಡೆ, ತಮ್ಮ ಆಕಳಿಗೆ ಹಬ್ಬದ ದಿನದಂದು ಕಟ್ಟಿದ್ದ 20 ಗ್ರಾಂ.ಗೂ ಅಧಿಕ ತೂಕದ ಬಂಗಾರದ ಲಕ್ಷ್ಮೀ ಸರ ಕಳೆದು ಹೋಗಿತ್ತು. ಹುಡುಕಿ ಸುಸ್ತಾದ ಮಾಲೀಕರು ಸರ ತಿಂದಿದ್ದು ಕೊಟ್ಟಿಗೆಯಲ್ಲಿರುವ ಹಸುವೇ? ಕರುವೇ? ಎಂಬ ಅನುಮಾನದಲ್ಲಿ ತಿಂಗಳು ಕಾದರೂ ಸಗಣಿಯಲ್ಲಿ ಸರ ಬರದಿದ್ದಾಗ ಪಶುವೈದ್ಯ ಪಿ.ಎಸ್.ಹೆಗಡೆ ಸಂರ್ಪಸಿದರು. ಲೋಹ ಶೋಧಕದೊಂದಿಗೆ ಬಂದ ವೈದ್ಯರು ಸರ ತಿಂದಿದ್ದು ಹಸು ಎಂದು ಖಚಿತಪಡಿಸಿಕೊಂಡು ಶಸ್ತ್ರಚಿಕಿತ್ಸೆ ನಡೆಸಿ ಸರ ಹೊರ ತೆಗೆದಿದ್ದಾರೆ. ಜತೆಗೆ ಸರದ ಒಂದು ತಾಳಿ, ಕರುವಿನ ಹೊಟ್ಟೆ ಸೇರಿದ್ದನ್ನೂ ಪಶುವೈದ್ಯರು ಪತ್ತೆ ಹಚ್ಚಿದ್ದಾರೆ. ಎರಡು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಗೆ ಉಮ್ಮಚಗಿ ಪಶುವೈದ್ಯ ಡಾ.ರಾಜೇಶ, ರಘುಪತಿ ಭಟ್ಟ, ವಾಣಿ ಮತ್ತು ಶ್ರೀಧರ ಸಹಕರಿಸಿದರು.