

ನವದೆಹಲಿ: ಭಾರತದ ಷೇರುಪೇಟೆ ಸತತ ಎರಡನೇ ದಿನವೂ ಲಾಭ ದಾಯಕ ವಹಿವಾಟು ದಾಖಲಿಸಿದೆ. ಸೋಮವಾರ ಹಾಗೂ ಮಂಗಳ ವಾರ ಹೂಡಿಕೆದಾರರ ಸಂಪತ್ತು 5.36 ಲಕ್ಷ ಕೋಟಿ ರೂ. ವೃದ್ಧಿಸಿದೆ. ಸೋಮವಾರ 3.49 ಲಕ್ಷ ಕೋಟಿ ಏರಿಕೆ ಕಂಡಿತ್ತು. ಸೆನ್ಸೆಕ್ಸ್ 672.71 (ಶೇ. 1.14) ಅಂಶ ಹೆಚ್ಚಳ ಆಗಿದ್ದು, 59,855.93ಕ್ಕೆ ಮಂಗಳವಾರದ ವಹಿವಾಟು ಮುಗಿದಿದೆ. ನಿಫ್ಟಿ 179.55 (ಶೇ. 1.02) ಪಾಯಿಂಟ್ ಏರಿಕೆ ಆಗಿದ್ದು, 17,805.25ರಲ್ಲಿ ವಹಿವಾಟು ಅಂತ್ಯವಾಗಿದೆ. ಎನ್ಟಿಪಿಸಿ, ಪವರ್ ಗ್ರಿಡ್, ಎಸ್ಬಿಐ, ಟೈಟಾನ್, ರಿಲಯನ್ಸ್, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್ ಷೇರು ಮೌಲ್ಯ ಶೇ. 5.48ರಷ್ಟು ಏರಿಕೆ ಆಗಿದೆ. ಇನ್ನೊಂದೆಡೆ ಸನ್ ಫಾರ್ವ, ಅಲ್ಟ್ರಾಟೆಕ್ ಸಿಮೆಂಟ್, ಇಂಡಸ್ಇಂಡ್ ಬ್ಯಾಂಕ್, ಡಾ. ರೆಡ್ಡಿಸ್ ಲ್ಯಾಬ್ ನಷ್ಟ ಅನುಭವಿಸಿವೆ.
ಚಿನ್ನ ತುಟ್ಟಿ, ಬೆಳ್ಳಿ ಅಗ್ಗ: ದೆಹಲಿ ಚಿನಿವಾರಪೇಟೆಯಲ್ಲಿ ಮಂಗಳವಾರ ಬಂಗಾರದ ದರ 302 ರೂ. ಏರಿಕೆ ಆಗಿ 10 ಗ್ರಾಂನ ಬೆಲೆ 46,814 ರೂ.ಗೆ ತಲುಪಿದೆ. ಬೆಳ್ಳಿ ಬೆಲೆ 597 ರೂ. ಅಗ್ಗವಾಗಿದ್ದು, ಕೆ.ಜಿ. ದರ 60,625 ರೂ.ಗೆ ಇಳಿಕೆ ಕಂಡಿದೆ.