ದಲಿತ ಉದ್ಯಮಿಗಳಿಗೆ ನೆರವು: ನಿವೇಶನ ಅನುಪಾತ ಬದಲು; ಸಿಎಂ ಬೊಮ್ಮಾಯಿ ಸಮ್ಮತಿ

Dalith
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶನಿವಾರ ಅಭಿನಂದಿಸಿದ ರಾಜ್ಯ ದಲಿತ ಉದ್ದಿಮೆದಾರರ ಸಂಘದ ನಿಯೋಗ.
Published on

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡದ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನಗಳ ಹಂಚಿಕೆ ಅನುಪಾತ ಬದಲಾವಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ದಲಿತ ಉದ್ದಿಮೆದಾರರ ಸಂಘದ ನಿಯೋಗದ ಜತೆಗೆ ಶನಿವಾರ ಸಭೆ ನಡೆಸಿ ಈ ನಿರ್ಧಾರ ಪ್ರಕಟಿಸಿದ್ದಾರೆ.

ಎಸ್​ಸಿ, ಎಸ್​ಟಿ ಉದ್ದಿಮೆದಾರರಿಗೆ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ ಶೇ.60, ರಾಜ್ಯಮಟ್ಟದ ಸಮಿತಿಯಲ್ಲಿ ಶೇ.40ರಷ್ಟು ಕೈಗಾರಿಕಾ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಆದರೆ ದಲಿತ ಉದ್ದಿಮೆದಾರರಲ್ಲಿ ಬಹುತೇಕರ ಯೋಜನಾವೆಚ್ಚ 15 ಕೋಟಿ ರೂ.ಗಿಂತ ಕಡಿಮೆಯಿರುವ ಕಾರಣ ಜಿಲ್ಲಾ ಹಂತದ ನಿವೇಶನಗಳ ಹಂಚಿಕೆ ಪ್ರಮಾಣ ಹೆಚ್ಚಿಸಬೇಕು ಎಂಬ ನಿಯೋಗದ ಮನವಿಗೆ ಸಿಎಂ ತಕ್ಷಣ ಸ್ಪಂದಿಸಿದರು. ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಶೇ. 70 ಹಾಗೂ ರಾಜ್ಯಮಟ್ಟದ ಸಮಿತಿಯಲ್ಲಿ ಶೇ.30ರಷ್ಟು ನಿವೇಶನಗಳ ಹಂಚಿಕೆಗೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ದಲಿತ ಉದ್ದಿಮೆದಾರರಿಗೆ 2009ರಲ್ಲಿ ನಿಗದಿಪಡಿಸಿದ ಮೀಸಲಿನಂತೆ ಕೈಗಾರಿಕಾ ನಿವೇಶನ ಹಂಚಿಕೆಯಲ್ಲಿನ ಕೊರತೆ ಭರ್ತಿ ಮಾಡಲು ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಜಂಟಿ ಹೊಣೆಗಾರಿಕೆ: ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಹಾಗೂ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಂಟಿಯಾಗಿ ಲ್ಯಾಂಡ್ ಆಡಿಟ್ ಮಾಡಿ ವರದಿ ಸಲ್ಲಿಸಬೇಕು ಎಂದು ಸಿಎಂ ಬೊಮ್ಮಾಯಿ ನಿರ್ದೇಶಿಸಿದರು. ವರದಿ ಸಲ್ಲಿಕೆಯಾದ ನಂತರ ವಸ್ತುಸ್ಥಿತಿ ತಿಳಿಯಲಿದ್ದು, ಕೊರತೆಯಾಗಿರುವ ಭೂಮಿಯನ್ನು ನಿಗದಿತ ಕಾಲಮಿತಿಯೊಳಗೆ ಸರಿದೂಗಿಸಿ, ಎಸ್​ಸಿ ಹಾಗೂ ಎಸ್​ಟಿ ಉದ್ದಿಮೆದಾರರಿಗೆ ತುಂಬಿಕೊಡಬೇಕು ಎಂದು ಸಲಹೆ ನೀಡಿದರು. ಕೆಎಸ್​ಎಫ್​ಸಿಯಲ್ಲಿ ಸಾಲ ಸೌಲಭ್ಯ ಪಡೆಯುವಾಗ ಸಮಾನಾಂತರ ಭದ್ರತೆಗೆ ಕೈಗಾರಿಕಾ ಭೂಮಿಯ ವಾಸ್ತವ ಬೆಲೆಯನ್ನು ಪರಿಗಣಿಸಬೇಕು ಎಂಬ ಬೇಡಿಕೆ ಬಗ್ಗೆ ಆರ್ಥಿಕ ಇಲಾಖೆ ಜತೆಗೆ ರ್ಚಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ದಲಿತ ಉದ್ದಿಮೆದಾರರ ಕೈಗಾರಿಕೆಯಲ್ಲಿ ಕನಿಷ್ಠ 10 ಎಸ್​ಸಿ, ಎಸ್​ಟಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರೆ, ವೇತನ ಪ್ರೋತ್ಸಾಹಕ ನೀಡಬೇಕೆಂಬ ಸಂಘದ ಮನವಿಗೆ ಮುಂದಿನ ಆಯವ್ಯಯದಲ್ಲಿ ಪರಿಶೀಲಿಸುವ ಭರವಸೆಯನ್ನು ಸಿಎಂ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net