ಅತಂತ್ರರ ಕೈಹಿಡಿದ ಸರ್ಕಾರ: ಯೂಕ್ರೇನ್​ನಿಂದ ಬಂದವರಿಗೆ ರಾಜ್ಯದಲ್ಲಿ ಉಚಿತ ಶಿಕ್ಷಣ..

Front
ಯೂಕ್ರೇನ್​ನಿಂದ ವಾಪಸಾದ ವಿದ್ಯಾರ್ಥಿಗಳ ಜತೆ ಸಚಿವ ಡಾ.ಕೆ.ಸುಧಾಕರ್ ಸಭೆ.
Published on

ಬೆಂಗಳೂರು: ಯುದ್ಧಪೀಡಿತ ಯೂಕ್ರೇನ್​ನಿಂದ ವೈದ್ಯಕೀಯ ವ್ಯಾಸಂಗವನ್ನು ಅರ್ಧಕ್ಕೆ ಕೈಬಿಟ್ಟು ತವರಿಗೆ ಮರಳಿರುವ ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಚಿಂತೆ ಪರಿಹರಿಸಲು ಸರ್ಕಾರ ಮುಂದಾಗಿದೆ. ಅತಂತ್ರರಾಗಿರುವ ವಿದ್ಯಾರ್ಥಿಗಳಿಗೆ ರಾಜ್ಯದಲ್ಲೇ ಕಲಿಕೆ ಮುಂದುವರಿಸಲು ಇಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಿಕೊಡುವಂತಹ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶದಲ್ಲೇ ಪ್ರಪ್ರಥಮವಾಗಿ ಇಂಥ ಅನುಕರಣೀಯ ನಿರ್ಧಾರವನ್ನು ಬಸವರಾಜ ಬೊಮ್ಮಾಯಿ ಸರ್ಕಾರ ಕೈಗೊಂಡಿದೆ.

ಸೋಮವಾರ ವಿಧಾನಸೌಧದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಯೂಕ್ರೇನ್​ನಿಂದ ವಾಪಸಾದ 40 ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ಹಿನ್ನೆಲೆಯಲ್ಲಿ ಸಚಿವ ಸುಧಾಕರ್ ಈ ಸಭೆ ನಡೆಸಿದರು.

ಸಮಿತಿಯಲ್ಲಿ ಯಾರ್ಯಾರು?: ಯೂಕ್ರೇನ್​ನಿಂದ ಬಂದವರ ಭವಿಷ್ಯ ರೂಪಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು. ಇದರಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ನಾಲ್ವರು ಸದಸ್ಯರು, ರಾಜೀವ್​ಗಾಂಧಿ ಆರೋಗ್ಯ ವಿವಿ ಕುಲಪತಿ ಇರುತ್ತಾರೆ. ಸಭೆಯ ನಿರ್ಧಾರಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಸಚಿವ ಸುಧಾಕರ್, ಯುದ್ಧಪೀಡಿತ ಯೂಕ್ರೇನ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 700 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಅವರ ಶಿಕ್ಷಣದ ಬಗ್ಗೆ ತಾತ್ಕಾಲಿಕವಾಗಿ ಒಂದು ಅಭಿಪ್ರಾಯಕ್ಕೆ ಬರಲಾಗಿದೆ ಎಂದರು. ಮೊದಲ ವರ್ಷದಿಂದ ಆರಂಭವಾಗಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಇಲ್ಲಿದ್ದಾರೆ. ರಾಜ್ಯದಲ್ಲಿ 60 ಮೆಡಿಕಲ್ ಕಾಲೇಜುಗಳಿವೆ.

ವಿದ್ಯಾರ್ಥಿಗಳು ಈ ಕಾಲೇಜುಗಳಲ್ಲಿ ತಮ್ಮ ವ್ಯಾಸಂಗವನ್ನು ಆಯಾ ವರ್ಷದಲ್ಲೇ ಮುಂದುವರಿಸಲು ಅವಕಾಶ ಕಲ್ಪಿಸಲಾಗುವುದು ಎಂದರು. ಯೂಕ್ರೇನ್​ನಿಂದ ಹಿಂದಿರುಗಿದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು, ಎನ್​ಎಂಸಿ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾದ ಬೇಡಿಕೆಗಳನ್ನು ಸಿದ್ಧಪಡಿಸುವ ಕೆಲಸವನ್ನು ಸಮಿತಿ ಮಾಡಲಿದೆ. ಈ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಆರೋಗ್ಯ ಸಚಿವರ ಮುಂದೆ ಇಡಲಾಗುವುದು. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಕ್ರಮ ವಹಿಸುತ್ತಿದ್ದಾರೆ ಎಂದರು.

ಮಾರ್ಪಾಟಿಗೆ ಸಲಹೆ: ವಿದ್ಯಾರ್ಥಿಗಳು ಸುರಕ್ಷಿತವಾಗಿ ಹಿಂದಿರುಗಿರುವುದೇ ದೊಡ್ಡ ಭಾಗ್ಯ. ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಮುತುವರ್ಜಿಯಿಂದ ಇದು ಸಾಧ್ಯವಾಗಿದೆ. ವಿದ್ಯಾರ್ಥಿಗಳಿಗೂ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಇತ್ತು. ಈಗ ಸರ್ಕಾರದ ತೀರ್ಮಾನಕ್ಕೆ ಅವರೆಲ್ಲರೂ ಒಪ್ಪಿದ್ದಾರೆ. ವೈದ್ಯಕೀಯ ಶಿಕ್ಷಣದಲ್ಲಿ ಮಾರ್ಪಾಡು ತರುವ ಬಗ್ಗೆ ವಿದ್ಯಾರ್ಥಿಗಳು ಸಲಹೆ ನೀಡಿದ್ದಾರೆ. ಈ ಬಗ್ಗೆಯೂ ಸಮಿತಿಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದರು.

ಕೇಂದ್ರ ತೀರ್ಮಾನ: ಸಮಿತಿಯಿಂದ ಕೇಂದ್ರ ಸರ್ಕಾರಕ್ಕೆ ಎಲ್ಲ ಬಗೆಯ ಮನವಿಗಳನ್ನು ಸಲ್ಲಿಸಲಾಗುವುದು. ಈ ವಿಚಾರದಲ್ಲಿ ಕೇಂದ್ರ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ ಎಂದರು.

ಎಲ್ಲವೂ ಸರಿ ಹೋಗಲು 3-4 ವಾರ ಬೇಕು. ನಾನು ಮತ್ತು ಸಿಎಂ ದೆಹಲಿಗೆ ಹೋಗಿ ಕೇಂದ್ರ ಆರೋಗ್ಯ ಸಚಿವರ ಜತೆ ರ್ಚಚಿಸುತ್ತೇವೆ. ನಮ್ಮಲ್ಲಿ 60 ಕಾಲೇಜುಗಳಿವೆ. ಅವುಗಳಲ್ಲಿ ಅವಕಾಶ ನೀಡಲು ಯೋಜನೆ ರೂಪಿಸಬೇಕಾಗಿದೆ. ಎನ್​ಎಂಸಿ ನಿಯಮಗಳ ಪ್ರಕಾರ ಮಾಡಬೇಕಾಗುತ್ತದೆ. ಈ ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟರೆ ಇಲ್ಲಿ ಮ್ಯಾನೇಜ್​ವೆುಂಟ್ ಕೋಟಾದಲ್ಲಿ ಸೀಟು ಪಡೆದವರು ಪ್ರಶ್ನೆ ಮಾಡುತ್ತಾರೆ. ಬೇರೆ ದೇಶದಲ್ಲಿ ಓದುವವರು ನಮಗೂ ಅವಕಾಶ ಕೊಡಿ ಅಂತ ಕೇಳಬಹುದು. ಆದ್ದರಿಂದ ಬಹಳಷ್ಟು ಸವಾಲಿದೆ. ಎಲ್ಲವನ್ನೂ ಬಗೆ ಹರಿಸಿ ಯೂಕ್ರೇನ್​ನಿಂದ ಬಂದ ವಿದ್ಯಾರ್ಥಿಗಳಿಗೆ ಒಳ್ಳೆಯದು ಮಾಡುತ್ತೇವೆ. | ಡಾ.ಕೆ.ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ ಯೂಕ್ರೇನ್​ನಲ್ಲೂ ಶಿಕ್ಷಣ ಚೆನ್ನಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ನಿಯಮದಂತೆಯೇ ಕ್ಯಾಂಪಸ್ ಹಾಗೂ ಶೈಕ್ಷಣಿಕ ವ್ಯವಸ್ಥೆ ಇದೆ. ಪ್ರತಿಷ್ಠಿತ ಕಾಲೇಜುಗಳಿಗೆ ಸೇರಿದ್ದೆವು. ಸಾಕಷ್ಟು ಪರೀಕ್ಷೆ ನಡೆಸುತ್ತಾರೆ. ಪ್ರಾಕ್ಟಿಕಲ್ ಸಹ ಚೆನ್ನಾಗಿದೆ. ಆಪರೇಷನ್ ಗಂಗಾದ ಮೂಲಕ ನಮ್ಮನ್ನು ಕರೆ ತಂದಿದ್ದಕ್ಕೆ ಧನ್ಯವಾದಗಳು. ನಮಗೆ ಇಲ್ಲಿಯೇ ದಾರಿ ತೋರಿ. ಬೇರೆಯವರ ಸೀಟು ಕಿತ್ತುಕೊಳ್ಳಲು ಬಯಸುವುದಿಲ್ಲ. ನಮಗೆ ಓದಲು ಅವಕಾಶ ಕೊಡಿ ಅಷ್ಟೇ. ಆರನೇ ವರ್ಷದಲ್ಲಿ ಓದುತ್ತಿರುವವರಲ್ಲಿ ನೀಟ್ ಪಾಸ್ ಆದವರೂ ಇದ್ದಾರೆ , ಪಾಸ್ ಮಾಡದೇ ಇರುವವರೂ ಇದ್ದಾರೆ. ಎಲ್ಲರನ್ನೂ ಪರಿಗಣಿಸಿ. | ಬಹುತೇಕ ವಿದ್ಯಾರ್ಥಿಗಳ ಒಟ್ಟಾಭಿಪ್ರಾಯ ನಮಗೆ ಅಲ್ಲಿ 6 ವರ್ಷದ ಕೋರ್ಸ್ ಇತ್ತು. 5 ವರ್ಷ ಮುಗಿದಿದೆ. ನನಗೆ ಇಲ್ಲಿ ಅವಕಾಶ ಕೊಡಿ. ಅಲ್ಲಿನ ಸರ್ಕಾರ ಆನ್​ಲೈನ್​ನಲ್ಲಿ ಎಜುಕೇಶನ್ ಕೊಡುತ್ತೇವೆ ಅಂದಿದೆ. ಆದರೆ ಎಷ್ಟೋ ಟೀಚರ್​ಗಳೇ ಯುದ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಕರ್ನಾಟಕ ಸರ್ಕಾರ ಸಹಾಯ ಮಾಡಬೇಕು. | ಅನಿಲ್ ಕುಮಾರ್, ಮೈಸೂರಿನ ವಿದ್ಯಾರ್ಥಿ ಅಲ್ಲಿನ ಟೀಚರ್​ಗಳೇ ಬಂಕರ್​ನಲ್ಲಿ ಕೂತಿದ್ದಾರೆ. ಟೀಚರ್ಸ್ ಆನ್​ಲೈನ್ ಕ್ಲಾಸ್ ಮಾಡಿದರೂ ನಮಗೆ ಎಷ್ಟು ಅರ್ಥ ಆಗುತ್ತೆ? ನಾವು ಮತ್ತೆ ಹೋದರೂ ನಮಗೆ ಕ್ಲಾಸ್ ಎಂದಿನಂತೆ ಸಿಗಲ್ಲ. ದಯವಿಟ್ಟು ನಮಗೆ ಆದಷ್ಟು ಇಲ್ಲೇ ಪ್ರವೇಶಕ್ಕೆ ಅವಕಾಶ ಮಾಡಿಕೊಡಿ. | ವಿಜಯಲಕ್ಷ್ಮಿ, ಬೆಂಗಳೂರು ನಾನು ಡಾಕ್ಟರ್ ಆಗಲೇಬೇಕು ಸರ್. ಅದಕ್ಕೆ ಅಲ್ಲಿಗೆ ಹೋಗಿದ್ದು. ನಮಗೆ ಆನ್​ಲೈನ್​ನಲ್ಲಿ ಪ್ರಾಕ್ಟಿಕಲ್ ತುಂಬ ಕಷ್ಟವಾಗುತ್ತದೆ. | ಸ್ನೇಹಾ, ಬೆಂಗಳೂರು ಯೂಕ್ರೇನ್​ನಲ್ಲಿ ಆರು ವರ್ಷಗಳಿಗೆ ನಮಗೆ 35-40 ಲಕ್ಷ ಹಣ ಖರ್ಚು ಆಗುತ್ತೆ. ಆದರೆ ಇಲ್ಲಿ ಅದಕ್ಕಿಂತ ಹೆಚ್ಚು ಹಣ ಖರ್ಚು ಹೆಚ್ಚಾಗುತ್ತೆ. ಅದಕ್ಕೆ ಅಲ್ಲಿಗೆ ಹೋದೆವು | ಶೀತಲ್

ಕ್ರಮಗಳು ಏನೇನು?
  • ರಾಜ್ಯದಲ್ಲಿ 60 ಮೆಡಿಕಲ್ ಕಾಲೇಜುಗಳಿವೆ, ಯೂಕ್ರೇನ್​ನಿಂದ ಬಂದ ವರು ಈ ಕಾಲೇಜುಗಳಲ್ಲಿ ತಮ್ಮ ವ್ಯಾಸಂಗವನ್ನು ಆಯಾ ವರ್ಷದಲ್ಲೇ ಮುಂದುವರಿಸಲು ಕ್ರಮ
  • ವೈದ್ಯ ಶಿಕ್ಷಣ ತರಬೇತಿ ಮುಂದುವರಿಕೆ, ಎನ್​ಎಂಸಿ, ಕೇಂದ್ರ ಸರ್ಕಾರದ ಎದುರು ಸಮಿತಿ ಬೇಡಿಕೆ ಇಡಲಿದೆ

ಉಚಿತ ಶಿಕ್ಷಣ: ಸದ್ಯಕ್ಕೆ ರಾಜ್ಯದ ಮೆಡಿ ಕಲ್ ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳನ್ನು ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳುತ್ತಿಲ್ಲ. ಆದರೆ ಅವರ ಕಲಿಕೆ, ತರಬೇತಿಯನ್ನು ಮುಂದುವರಿಸಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿ ಮಾಡಬೇಕಿಲ್ಲ. ಉಚಿತವಾಗಿಯೇ ಶಿಕ್ಷಣ ಮುಂದುವರಿಸಬಹುದು ಎಂದು ಸಚಿವರು ಸ್ಪಷ್ಟಪಡಿಸಿದರು.

ವೈದ್ಯ ಶಿಕ್ಷಣ ಶುಲ್ಕ ಇಳಿಕೆ; ಸಿಎಂ ಹೇಳಿಕೆ

ದಾವಣಗೆರೆ: ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಶುಲ್ಕ ಕಡಿಮೆ ಮಾಡುವ ಉದ್ದೇಶದಿಂದ ಎ, ಬಿ, ಸಿ ವರ್ಗಗಳನ್ನಾಗಿ ವಿಂಗಡಿಸಲು ತೀರ್ವನಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಸರ್ಕಾರದ ಶುಲ್ಕ ಕಡಿಮೆಯಿದ್ದರೂ, ವೈದ್ಯಕೀಯ ಶಿಕ್ಷಣದ ವೆಚ್ಚ ಖಾಸಗಿ ವಲಯದಲ್ಲಿ ಹೆಚ್ಚಾಗುತ್ತಿದೆ. ಶೇ. 90-95 ಅಂಕ ಪಡೆದ ವಿದ್ಯಾರ್ಥಿಗಳಿಗೆ ಕೆಲವೊಮ್ಮೆ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಆಗುತ್ತಿಲ್ಲ. ಹೀಗಾಗಿ ಮ್ಯಾನೇಜ್​ವೆುಂಟ್ ಮತ್ತು ಎನ್​ಆರ್​ಐ ಸೀಟು ಹುಡುಕಿಕೊಂಡು ಹೋಗುತ್ತಿದ್ದಾರೆ, ಆದರೆ ಅದು ದುಬಾರಿ ಆಗಿರುವುದರಿಂದ ಪರ್ಯಾಯ ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆಗೆ ರ್ಚಚಿಸಿದ್ದೇವೆ. ವೈದ್ಯಕೀಯ ಕೋರ್ಸಗಳ ಬಗ್ಗೆ ರಾಷ್ಟ್ರೀಯ ವೈದ್ಯಕೀಯ ಮಂಡಳಿ ನಿರ್ಧರಿಸುತ್ತದೆ. ಯೂಕ್ರೇನ್ ಯುದ್ಧ ನಂತರ ಮಂಡಳಿ ಮರು ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net