ಹಸಿರು ಬಜೆಟ್​ಗೆ ಸಿದ್ಧವಾಗ್ತಿದೆ ಚೌಕಟ್ಟು: ದೇಶದಲ್ಲೇ ಮೊದಲ ಪ್ರಯೋಗ, ಸರ್ಕಾರದ ಮಹತ್ವದ ಹೆಜ್ಜೆ

Front
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಹವಾಮಾನ ಬದಲಾವಣೆಯಿಂದ ಆಗುವ ಪ್ರಕೃತಿ ವಿಕೋಪ ಹಾನಿ ತಡೆಗಟ್ಟಲು ಅಗತ್ಯವಾದ ಹಸಿರು ಬಜೆಟ್ ರೂಪಿಸುವ ವಿಷಯದಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಕಳೆದ 5 ವರ್ಷಗಳಲ್ಲಿ ಆಗಿರುವ ಪರಿಸರ, ಜೀವ ವೈವಿಧ್ಯತೆ ಹಾನಿಯ ಬಗ್ಗೆ ವರದಿ ಪಡೆಯುವ ಮೂಲಕ ಈ ಕುರಿತ ಚೌಕಟ್ಟು ರೂಪಿಸುತ್ತಿದೆ. ಹವಾಮಾನ ಬದಲಾವಣೆಯಿಂದ ಮಳೆ, ಬರ ಹೆಚ್ಚಾಗುತ್ತಿರುವ ಪರಿಣಾಮ ಪ್ರಕೃತಿಗೂ ಹಾನಿಯಾಗುತ್ತಿದೆ. ಈ ಪರಿಸ್ಥಿತಿ ಮುಂದುವರಿದರೆ ಭವಿಷ್ಯದ ದಿನಗಳು ಭೀಕರವಾಗಿರ ಲಿದೆ. ಆದ್ದರಿಂದಲೇ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ.

ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್) ಅಧ್ಯಯನದ ಪ್ರಾಥಮಿಕ ವರದಿ ಪ್ರಕಾರ ಕಳೆದ ಐದು ವರ್ಷಗಳಲ್ಲಿ 2500 ಕೋಟಿ ರೂ. ಹಾನಿಯಾಗಿರುವ ಅಂದಾಜು ಮಾಡಲಾಗಿದೆ. ಈ ಹಾನಿ ಪ್ರಕೃತಿ ವಿಕೋಪ, ಮನುಷ್ಯ ನಿರ್ವಿುತವೂ ಆಗಿದೆ.

ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹಸಿರು ಬಜೆಟ್ ರೂಪಿಸುವ ಮೂಲಕ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ, ಅಧ್ಯಯನ ಮಾಡಿ ವರದಿ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಐಸೆಕ್​ಗೆ ಸೂಚನೆ ನೀಡಿದ್ದರು. ಐಸೆಕ್ ನಿರ್ದೇಶಕ ಡಾ. ರಾಜಶೇಖರ್ ಮಾರ್ಗದರ್ಶನದಲ್ಲಿ ಡಾ. ಬಾಲಸುಬ್ರಮಣ್ಯ ಹಾಗೂ ಪ್ರೊ. ಮಹದೇಶ್ವರ ಅಧ್ಯಯನ ನಡೆಸಿದ್ದು, ಪ್ರಾಥಮಿಕ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಇನ್ನಷ್ಟು ಮಾಹಿತಿಯನ್ನು ಸರ್ಕಾರ ಬಯಸಿರುವುದರಿಂದ ಅಧ್ಯಯನ ಮುಂದುವರಿದಿದೆ.

ಮೊದಲ ಪ್ರಯತ್ನ: ಸಿಎಂ ಬೊಮ್ಮಾಯಿ ಶುಕ್ರವಾರ ಮಂಡಿಸಲಿರುವ ಬಜೆಟ್​ನಲ್ಲಿ ಹಸಿರು ಬಜೆಟ್​ಗೆ ಆದ್ಯತೆ ನೀಡಿದಲ್ಲಿ ಇಡೀ ದೇಶದಲಿ ಮೊದಲ ಪ್ರಯತ್ನ ಇದಾಗಲಿದೆ. ಈವರೆಗೆ ಯಾವುದೇ ರಾಜ್ಯ ಹಸಿರು ಬಜೆಟ್ ಮಂಡಿಸಿಲ್ಲ. ಕೇಂದ್ರ ಸರ್ಕಾರದಲ್ಲಿ ಚರ್ಚೆಯಾಗಿದೆ.

ಕಾರಣವೇನು?: ಪರಿಸರದ ಮೇಲಿನ ಹಾನಿ ವಿವಿಧ ವಲಯಗಳ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಪ್ರವಾಸೋದ್ಯಮದ ಮೇಲೆ ಆಗುವ ನಷ್ಟ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಮನುಷ್ಯನ ಉಳಿವಿನ ದೃಷ್ಟಿಯಿಂದಲೂ ಪರಿಸರ ಕಾಪಾಡುವುದು ಮುಖ್ಯವಾಗುತ್ತದೆ. ಆದ್ದರಿಂದಲೇ ಸರ್ಕಾರ ದಿಟ್ಟ ಹೆಜ್ಜೆಯನ್ನಿಡುವ ನಿರ್ಧಾರಕ್ಕೆ ಬಂದಿದೆ. ಅದನ್ನು ಬಜೆಟ್​ನಲ್ಲಿ ಕಾರ್ಯರೂಪಕ್ಕೆ ತರಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ.

ತಗ್ಗಿದ ಅರಣ್ಯ ಪ್ರಮಾಣ

  • 1973 ರಲ್ಲಿ ಶೇ. 74.19
  • 2018ರಲ್ಲಿ ಶೇ.48.04
  • ನಿತ್ಯ ಹರಿದ್ವರ್ಣ ಕಾಡು ಶೇ.56.07 ರಿಂದ ಶೇ.24.85ಕ್ಕೆ ಇಳಿಕೆ

ಹಾನಿ ಎಲ್ಲೆಲ್ಲಿ?

  • ಕಾಡು ಕಡಿಯುವುದು
  • ತೋಟಗಳಿಗಾಗಿ ಒತ್ತುವರಿ
  • ಪ್ರವಾಹ
  • ಭೂ ಕುಸಿತ
  • ಅಭಿವೃದ್ಧಿ ಹೆಸರಿನಲ್ಲಿ ನಡೆದಿರುವ ಹಾನಿ
  • ಮಣ್ಣು ಕೊಚ್ಚಿ ಹೋಗುವುದು
  • ಅಕ್ಕಪಕ್ಕದ ಜಮೀನು ಫಲವತ್ತತೆ ನಷ್ಟ
  •  ವಾಯುಮಾಲಿನ್ಯ

ಪಶ್ಚಿಮಘಟ್ಟದ ವೈವಿಧ್ಯತೆ

  • 25 ಜೀವ ವೈವಿಧ್ಯ ತಾಣಗಳು
  • 5 ರಾಷ್ಟ್ರೀಯ ಉದ್ಯಾನಗಳು
  • 21 ಅಭಯಾರಣ್ಯಗಳು
  • ಶರಾವತಿ, ಕಾಳಿ, ನೇತ್ರಾವತಿ, ಬೇಡ್ತಿ ಇತ್ಯಾದಿ ಅನೇಕ ನದಿಗಳು

ಪಶ್ಚಿಮಘಟ್ಟದ ಜೀವ ವೈವಿಧ್ಯ

  • ವಿವಿಧ ಜಾತಿಯ ಜೀವಸಂಕುಲ: 1.2 ಲಕ್ಷ ವಿಧ
  • ಹೂವು ಬಿಡುವ ಸಸ್ಯಗಳು: 4500 ವಿಧ
  • ಪಕ್ಷಿಗಳು : 508 ವಿಧ
  • ಸಸ್ತನಿಗಳು: 150 ವಿಧ
  • ಸರಿಸೃಪಗಳು: 156 ವಿಧ
  • ಉಭಯಚರಗಳು: 135 ವಿಧ
  • ಮೀನುಗಳು: 405 ವಿಧ
  • ಚಿಟ್ಟೆಗಳು: 330 ವಿಧ
  • ಔಷಧೀಯ ಸಸ್ಯಗಳು: 1493 ವಿಧ

ಪರಿಸರ ರಕ್ಷಣೆಗೆ ಏನು ಆಗಬೇಕು?

  • ಎಲ್ಲ ಪಂಚಾಯಿತಿಗಳಲ್ಲಿ ಜೀವ ವೈವಿಧ್ಯ ಸಮಿತಿಗಳ ರಚನೆ
  • ನದಿ ಮೂಲಗಳನ್ನು ಕಾಪಾಡುವುದು
  • ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡುವುದು
  • ಜಮೀನುಗಳಿಗೆ ಕಾಡುಪ್ರಾಣಿಗಳ ಹಾವಳಿ ತಡೆಯಲು ಸೌರ ವಿದ್ಯುತ್ ಬೇಲಿ
  • ಬಯೋಗ್ಯಾಸ್​ಗೆ ಆದ್ಯತೆ
  • ಪರಿಸರ ಹಾನಿ ತಡೆಯುವುದು

ಪರಿಸರ ಹಾನಿಯ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲಾಗಿದೆ. ಅಧ್ಯಯನ ಮುಂದುವರಿಸಲು ಸರ್ಕಾರ ಹೇಳಿದೆ. ಸರ್ಕಾರ ಈ ವರದಿಯ ಆಧಾರದಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವ ವಿಶ್ವಾಸವಿದೆ. | ಡಾ. ಎಂ. ಬಾಲಸುಬ್ರಮಣ್ಯ ಸಹಾಯಕ ಪ್ರಾಧ್ಯಾಪಕ, ಐಸೆಕ್ ಗ್ರೀನ್ ಬಜೆಟ್ ಬಗ್ಗೆ ಜೀವ ವೈವಿಧ್ಯಮಂಡಳಿಯಿಂದ ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಸಿಎಂ ಪೂರಕವಾಗಿ ಪ್ರತಿಕ್ರಿಯಿಸಿದ್ದರು. ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ಸೂಚನೆ ನೀಡಿದ್ದರು. ಈ ಬಜೆಟ್​ನಲ್ಲಿ ಹಸಿರು ಆಯವ್ಯಯ ಪ್ರಕಟವಾಗುವ ವಿಶ್ವಾಸದಲ್ಲಿದ್ದೇವೆ. | ಅನಂತ ಹೆಗಡೆ ಆಶೀಸರ ಮಾಜಿ ಅಧ್ಯಕ್ಷರು, ಜೀವ ವೈವಿಧ್ಯ ಮಂಡಳಿ ರಾಜ್ಯದಲ್ಲಿ ಪರಿಸರ ಹಾನಿಯ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ 2500 ಕೋಟಿ ರೂ. ಹಾನಿಯಾಗಿದೆ. ಅದರಲ್ಲಿ ನೈಸರ್ಗಿಕ ವಿಕೋಪ ಹಾಗೂ ಮನುಷ್ಯ ನಿರ್ವಿುತ ಹಾನಿಗಳು ಸೇರಿವೆ. | ಡಿ. ರಾಜಶೇಖರ್ ನಿರ್ದೇಶಕ, ಐಸೆಕ್

ಏನಿದು ಹಸಿರು ಬಜೆಟ್?: ಹಸಿರು ಬಜೆಟ್​ಗೆ ಪ್ರತ್ಯೇಕ ಹಣವನ್ನೇನು ಮೀಸಲಿಡುವುದಿಲ್ಲ. ವಿವಿಧ ಇಲಾಖೆಗಳಲ್ಲಿ ಆಯಾ ಅನುದಾನದಲ್ಲೇ ಹಸಿರೀಕರಣಕ್ಕೆ ಹಣ ಮೀಸಲಿಡಲಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ. ಅರಣ್ಯ ಮಾತ್ರವಲ್ಲದೇ ನಗರಾಭಿ ವೃದ್ಧಿ, ಗ್ರಾಮೀಣಾಭಿವೃದ್ಧಿ, ಪೌರಾಡಳಿತ, ಕಂದಾಯ, ಪಶು ಸಂಗೋಪನೆ ಇತ್ಯಾದಿ ಇಲಾಖೆಗಳಲ್ಲಿ ಶೇ.20 ಅನುದಾನವನ್ನು ಹಸಿರು ಬಜೆಟ್​ಗಾಗಿ ಮೀಸಲಿಡುವ ನಿರೀಕ್ಷೆ ಇದೆ. ಆ ಹಣವನ್ನು ಹಸಿರೀಕರಣ ಮತ್ತಿತರ ಯೋಜನೆಗಳಿಗಷ್ಟೇ ವೆಚ್ಚ ಮಾಡ ಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net