

ಸ್ನೇಹಿತರು ಬಗೆಬಗೆಯ ಮರಗಳ ನೆರಳನ್ನು ಹುಡುಕುತ್ತಾ ಹೊರಟರು. ಪ್ರವಾದಿಯವರು ಒಂದು ಜಾಲಿ ಮರದ ಕೆಳಗೆ ವಿಶ್ರಮಿಸತೊಡಗಿದ್ದರು. ಅವರು ತಮ್ಮ ಒರೆಯಲ್ಲಿದ್ದ ಖಡ್ಗವನ್ನು ಮರದ ರೆಂಬೆಗೆ ನೇತು ಹಾಕಿದ್ದರು. ಸ್ನೇಹಿತರು ಅವರಿಂದ ಸ್ವಲ್ಪ ದೂರ ಹೋಗಿ, ನಿದ್ರೆ ಮಾಡಿದರು. ಸ್ವಲ್ಪ ಸಮಯದ ನಂತರ ಪ್ರವಾದಿವರ್ಯರು ಸ್ನೇಹಿತರನ್ನು ಕರೆಯುತ್ತಿರುವ ಧ್ವನಿ ಆಲಿಸಿ ಇವರು ಎಚ್ಚೆತ್ತು, ಅವರ ಹತ್ತಿರ ಹೋದರು.
ಅಲ್ಲಿ ಒಬ್ಬ ಹಳ್ಳಿಗನು ಅವರ ಎದುರು ಕುಳಿತಿರುವುದನ್ನು ಕಂಡರು, ಪ್ರವಾದಿ ಹೇಳಿದರು, ನಾನು ನಿದ್ರೆಯಲ್ಲಿದ್ದಾಗ ಈ ವ್ಯಕ್ತಿ ನನ್ನ ಖಡ್ಗವನ್ನು ಎಳೆದುಕೊಂಡನು. ನನಗೆ ತಕ್ಷಣ ಎಚ್ಚರವಾಯಿತು, ನೋಡಿದರೆ ಇವನ ಕೈಯಲ್ಲಿ ನನ್ನ ಖಡ್ಗವಿತ್ತು. ನನ್ನಿಂದ ನಿಮ್ಮನ್ನು ಯಾರು ರಕ್ಷಿಸಬಲ್ಲರು ಎಂದು ಪ್ರಶ್ನಿಸಿದನು, ಅಲ್ಲಾಹ್! ಎಂದು ಪ್ರವಾದಿ ಹೇಳಿದರು. ಈಗ ಇವನೇ ನನ್ನ ಮುಂದೆ ಕುಳಿತ್ತಿದ್ದಾನೆ, ಅನಂತರ ಪ್ರವಾದಿ ಆ ವ್ಯಕ್ತಿಯನ್ನು ಶಿಕ್ಷಿಸಲಿಲ್ಲ. ಭರವಸೆ ಮತ್ತು ಧೈರ್ಯದ ಅತ್ಯುನ್ನತ ಮಾದರಿಯಿದು.
ಅಪಾಯದ ಸ್ಥಿತಿಯಲ್ಲಿಯೂ ಪ್ರವಾದಿವರ್ಯರು ಸ್ವಲ್ಪವೂ ಅಂಜದೆ, ಅಳುಕದೆ ಸಂಪೂರ್ಣ ವಿಶ್ವಾಸದಿಂದ ಅಲ್ಲಾಹನೇ ನನ್ನನ್ನು ರಕ್ಷಿಸುವವನು ಎಂದು ಉತ್ತರಿಸಿದರು. ನಿಜವಾಗಿಯೂ ಅಲ್ಲಾಹನು ಅವರನ್ನು ರಕ್ಷಿಸಿದನು. ಆ ಸಂದರ್ಭದಲ್ಲಿ ಪ್ರವಾದಿಯವರ ಚಾರಿತ್ರ್ಯದ ಮತ್ತೊಂದು ಅಂಶವು ಪ್ರತ್ಯಕ್ಷವಾಯಿತು. ತಮ್ಮನ್ನು ಕೊಲೆ ಮಾಡಲು ಬಂದ ವ್ಯಕ್ತಿಯ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿದ ಬಳಿಕವೂ ಪ್ರವಾದಿವರ್ಯರು ಆತನ ವಿರುದ್ಧ ಯಾವುದೇ ಪ್ರತೀಕಾರ ಕ್ರಮವನ್ನು ಕೈಗೊಳ್ಳಲಿಲ್ಲ. ಅವರ ಚಾರಿತ್ರ್ಯದ ಈ ಶ್ರೇಷ್ಠತೆಯೇ ಸಹಸ್ರಾರು ಚಾರಿತ್ರ್ಯವಂತರು ಜನ್ಮ ತಾಳುವುದಕ್ಕೆ ಕಾರಣವಾಯಿತು.