

ನಿನಗೆ ಧರ್ಮನಿರ್ಣಯವನ್ನು ಮಾಡುವ ಬಲವು ಜನುಜನುಮಗಳಿಂದ ಲಭ್ಯವಾಗಿರುತ್ತದೆ. ಅದಕ್ಕೆ ತಕ್ಕಂತೆಯೇ ಕರ್ಮವನ್ನು ಅರಿತು ಮಾಡಬೇಕು. ಮಮತೆಗೆ ಒಳಪಡದೆ, ನಿರ್ಮಲವಾದ ಉತ್ಸಾಹದಿಂದ ನೀನು ಕರ್ವಚರಣೆಯನ್ನು ಮಾಡಿದೆ ಎಂದಾದರೆ ಬ್ರಹ್ಮಸಾಮೀಪ್ಯವನ್ನು ಅನುಭವಿಸುವೆ ಎನ್ನುತ್ತದೆ ಈ ಕಗ್ಗ.
ಜಗತ್ತು ಎಂದರೆ ಕ್ರಿಯೆ. ಇಲ್ಲಿ ಯಾರೂ, ಯಾವುದೂ ಕೆಲಸವನ್ನೂ ಮಾಡದೆ ಇರಲು ಸಾಧ್ಯವಿಲ್ಲ. ದೇಹದಲ್ಲಿ ನಡೆಯುವ ಸಹಜ ಕ್ರಿಯೆಗಳು, ಮನದ ಭಾವಗಳು ನಡೆಯುತ್ತಲೆ ಇರುತ್ತವೆ. ಒಬ್ಬ ವ್ಯಕ್ತಿಯು ಮಾಡುವ ಕಾರ್ಯ, ಭರಿಸುವ ಕರ್ತವ್ಯಗಳು ಅವನದ್ದೇ ನಿರ್ಧಾರವೆ? ಕೌಟುಂಬಿಕವಾಗಿ, ಔದ್ಯೋಗಿಕವಾಗಿ ನಿಭಾಯಿಸುವ ಕರ್ತವ್ಯಗಳೆಲ್ಲವೂ ಅವನದ್ದೇ ಆಯ್ಕೆ ಎಂದು ವಾದಿಸಬಹುದು. ಅರ್ಹತೆಯಿಂದ ಪಡೆದದ್ದು ಎಂದು ಬೀಗಬಹುದು. ಆದರೆ ಕೆಲವೊಂದು ಕರ್ತವ್ಯಗಳು ಅಚಾನಕ್ ಆಗಿ ಹೆಗಲೇರುತ್ತವೆ, ಕಾರ್ಯೋನ್ಮುಖರಾಗಲೆಬೇಕಾದ ಪರಿಸ್ಥಿತಿ ಒದಗಿಬರುತ್ತದೆ.ಉದಾಹರಣೆಗೆ, ಕಣ್ಣೆದುರೆ ಅಪಘಾತವೊಂದು ಸಂಭವಿಸಿದಾಗ ಸಹಾಯಕ್ಕೆ ಧಾವಿಸುವುದು, ಆಕಸ್ಮಿಕವಾಗಿ ಪ್ರಾಕೃತಿಕ ವಿಕೋಪವು ಸಂಭವಿಸಿದಾಗ ಸ್ಪಂದಿಸುವುದು, ಯಾವುದೋ ಸಮಾರಂಭಕ್ಕೆ ಹೋದಾಗ ಸ್ವಯಂ ಪ್ರೇರಿತರಾಗಿ ಕೆಲಸಗಳನ್ನು ಮಾಡುವುದು, ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದು ಹೀಗೆ ಬದುಕಿನುದ್ದಕ್ಕೂ ಸತ್ಕಾರ್ಯಗಳನ್ನು ಮಾಡುವ ಸಂದರ್ಭಗಳು ಅಚಾನಕ್ಕಾಗಿ ಬಂದೊದಗುತ್ತವೆ. ಆ ಕ್ಷಣಕ್ಕೆ ವ್ಯಕ್ತಿಯು ತನ್ನ ಅಂತರಂಗಕ್ಕೆ ಪ್ರೇರಣೆಯಾದಂತೆ, ಫಲದ ಬಗೆಗೆ ಯೋಚಿಸದೆಯೇ ಕಾರ್ಯೋನ್ಮುಖನಾಗುತ್ತಾನೆ. ಇದುವೆ ಸ್ವಧರ್ಮ. ಅದನ್ನು ಪಾಲಿಸುವುದು ಮನುಷ್ಯನಿಗೆ ಕರ್ತವ್ಯ. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರೆ, ಸನ್ನಿವೇಶವನ್ನು ತನ್ನ ಲಾಭಕ್ಕೆ ಬಳಸಿಕೊಂಡರೆ ಅದು ನೀಚತನ, ಅಧರ್ಮ.
ಧರ್ಮವೆಂದರೆ...: ಧರ್ಮವೆಂದರೆ ಲೋಕಕ್ಕೆ ಒಳಿತನ್ನು ಮಾಡುವ, ಎಲ್ಲವನ್ನು ಕಾಪಾಡುವ ಕಟ್ಟುಪಾಡು, ಉನ್ನತವಾದ ಜೀವನ ಕ್ರಮ. ಪ್ರಾಕೃತಿಕವಾಗಿರುವುದೆಲ್ಲದಕ್ಕೂ ಒಂದೊಂದು ಗುಣ ಧರ್ಮವಿರುವಂತೆ ಮನುಷ್ಯನಿಗೂ ಅವನೊಳಗಿನ ಸಹಜ ಶಕ್ತಿಯನ್ನು ಒಳಿತಿಗಾಗಿ ವಿನಿಯೋಗಿಸಬೇಕಾದ ಧರ್ಮವಿದೆ. ಈ ಸಹಜ ಶಕ್ತಿಯಿಂದ ಇತರಿರಿಗೆ ಹಾನಿಯನ್ನುಂಟು ಮಾಡದೆ, ಲೋಕದ ರಕ್ಷಣೆಗೆ ಮತ್ತು ಪ್ರಗತಿಗೆ ಪ್ರಯತ್ನಿಸಬೇಕು. ಇಂಥ ಅವಕಾಶಗಳು ಒದಗಿಬರುವುದಾದರೂ ಹೇಗೆ? ಜೀವನದ ಗತಿಯನ್ನು ನಿರ್ಣಯಿಸುವ, ನಿಯಂತ್ರಿಸುವ ಅಧಿಕಾರವು ಜೀವನಿಗಿಲ್ಲ. ಪರಮಾತ್ಮನೆಡೆಗೆ ಯಾತ್ರೆ ಹೊರಟಿರುವ ಆತ್ಮಕ್ಕೆ ಪ್ರತಿಯೊಂದು ಜನುಮವೂ ಒಂದೊಂದು ಹಂತ. ಹೀಗೆ ಸಾಗುವಾಗ ಜನುಜನುಮಗಳಲ್ಲೂ ಆರ್ಜಿಸಿದ ಕರ್ಮಶೇಷವನ್ನು, ಋಣಪಾಶಗಳನ್ನು ತನ್ನ ಜೊತೆಗೆ ಹೊತ್ತೊಯ್ಯುತ್ತದೆ. ಪ್ರಾರಬ್ಧ ಕರ್ಮಗಳಿಗೆ ಅನುಸಾರವಾಗಿ ಸನ್ನಿವೇಶಗಳು ಏರ್ಪಡುತ್ತವೆ. ಅದನ್ನು ನಿಭಾಯಿಸುವಾಗ ಮೋಹವಶನಾಗದೆ, ಉದ್ವೇಗಕ್ಕೆ ಒಳಗಾಗದೆ ಪ್ರಾಮಾಣಿಕತೆಯಿಂದ ಕರ್ಮವನ್ನು ಮಾಡಬೇಕು. ಹೀಗೆ ಕರ್ತವ್ಯಮುಖನಾಗುವ ಸಂದರ್ಭದಲ್ಲಿ ಸೂಕ್ತವಾದುದನ್ನು ಅನುಸರಿಸುವ ವಿವೇಕ ಸ್ವಾತಂತ್ರ್ಯವು ಮನುಜನಿಗಿದೆ. ಹಾಗಾಗಿ ಜೀವನದ ಗತಿಯನ್ನು, ಸಂದರ್ಭಗಳನ್ನು ನಿಯಂತ್ರಿಸಲು ವ್ಯಕ್ತಿಗೆ ಸಾಧ್ಯವಾಗದೆ ಇದ್ದರೂ ವಿವೇಕಯುತವಾದ ಕಾರ್ಯವನ್ನು ಮಾಡುವುದಕ್ಕೆ ಸ್ವಾತಂತ್ರ್ಯವಿದೆ. ಇದು ಮನುಜನಿಗಷ್ಟೇ ಇರುವ ವಿಶೇಷವಾದ ಶಕ್ತಿಯೂ ಹೌದು.
ಕರ್ತವ್ಯ ಅರಿಯಬೇಕು: ಹಾಗಾಗಿ ಸಂಸಾರ, ಉದ್ಯೋಗ ಅಥವಾ ಸಾಮಾಜಿಕ ಕ್ಷೇತ್ರಗಳಲ್ಲಿ ತನಗಿರುವ ಕರ್ತವ್ಯಗಳನ್ನು ವ್ಯಕ್ತಿಯು ತಿಳಿದುಕೊಳ್ಳಬೇಕು. ಅವುಗಳನ್ನು ಉಪೇಕ್ಷಿಸದೆ, ಫಲಾಪೇಕ್ಷೆಯನ್ನು ಮಾಡದೆ, ತಾನು ಮಾಡಿದೆ ಎಂಬ ವ್ಯಾಮೋಹವನ್ನು ಬೆಳೆಸಿಕೊಳ್ಳದೆ ಕರ್ತವ್ಯನಿಷ್ಠನಾಗಬೇಕು. ನಿಯಾಮಕ ಶಕ್ತಿಯ ಸಂಕಲ್ಪದಂತೆಯೇ ಕೆಲಸ-ಕಾರ್ಯಗಳು ಒದಗಿಬರುತ್ತವೆ, ಹೊಣೆಗಾರಿಕೆಯು ಹೆಗಲೇರುತ್ತದೆ ಎನ್ನುವುದನ್ನು ಅರ್ಥಮಾಡಿಕೊಂಡರೆ ಮನಸ್ಸು ವಿಚಲಿತವಾಗುವುದಿಲ್ಲ. ಹೀಗೆ ನಿರ್ಮಮ ಭಾವದಿಂದ, ನಿರ್ಮಲವಾದ ಉತ್ಸಾಹದಿಂದ ಸತ್ಕರ್ಮವನ್ನು ಮಾಡುವುದಕ್ಕಾಗಿ ತನ್ನ ಶಕ್ತಿ-ಸಾಮರ್ಥ್ಯಗಳನ್ನು ವಿನಿಯೋಗಿಸುವ ವ್ಯಕ್ತಿಯು ಪರಮಾತ್ಮನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ. ತಾನು ಮಾಡುವ ಪ್ರತಿಯೊಂದು ಕಾರ್ಯವು ದೇವತಾರ್ಚನೆ, ಒಂದು ಯಜ್ಞ ಎಂಬ ಭಾವದಿಂದ, ಸ್ವಧರ್ಮಕ್ಕನುಗುಣವಾಗಿ ಕರ್ಮಗಳನ್ನು ಮಾಡಿದಾಗ ಪರಬ್ರಹ್ಮ ಸಾಮೀಪ್ಯದ ಅನುಭವ. ಧರ್ಮವನ್ನು ಬಿಡದೆ ಕರ್ವಸಕ್ತನಾಗುವುದರಿಂದ ಜೀವೋತ್ಕರ್ಷ.
(ಲೇಖಕರು ಉಪನ್ಯಾಸಕರು, ಕವಯಿತ್ರಿ)
(ಪ್ರತಿಕ್ರಿಯಿಸಿ: vvsudina@gmail.com, kaviadoor@gmail.com)