ದೇವರಗುಡ್ಡ ದೇವಸ್ಥಾನದ ಆಡಳಿತ ಮಂಡಳಿ ಬದಲಾವಣೆಗೆ ಒತ್ತಾಯ

11-RNR-01
Published on

ರಾಣೆಬೆನ್ನೂರ: ತಾಲೂಕಿನ ದೇವರುಗಡ್ಡ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದ ಕಮಿಟಿ ಬದಲಾವಣೆ ಮಾಡುವಂತೆ ಒತ್ತಾಯಿಸಿ ಗ್ರಾಮದ ಬಾಬುದಾರರು ಹಾಗೂ ಗ್ರಾಮಸ್ಥರು ಬುಧವಾರ ನಗರದಲ್ಲಿ ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಮೂಲಕ ಧಾರವಾಡ ಜಿಲ್ಲಾ ನ್ಯಾಯಾಧೀಶ ಹಾಗೂ ಶ್ರೀ ಮಾಲತೇಶ ದೇವಸ್ಥಾನದ ಕಮಿಟಿ ಆಡಳಿತಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದ 60 ಮನೆಯ ಬಾಬುದಾರರಿಗೆ ಸಿಗುವ ಹಕ್ಕುಗಳು ದೊರೆಯುತ್ತಿಲ್ಲ. ಆದ್ದರಿಂದ ಬಾಬುದಾರರಿಗೆ ದೊರೆಯಬೇಕಾದ ಹಕ್ಕುಗಳು ಮತ್ತು ದೇವಸ್ಥಾನ ಕಮಿಟಿ ಬೈಲಾ ಪ್ರಕಾರ ಪ್ರತಿ 5 ವರ್ಷಕೊಮ್ಮೆ ಕಮಿಟಿ ಬದಲಾವಣೆ ಆಗಬೇಕು ಎಂದು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹೋರಾಟಗಳು ನಡೆಯುತ್ತಿವೆ.

ಆದ್ದರಿಂದ ಆಡಳಿತಾಧಿಕಾರಿಯವರು ಮಾಲತೇಶ ದೇವಸ್ಥಾನದ ಕಮಿಟಿ ಬೈಲಾ ಪ್ರಕಾರ 5 ವರ್ಷಕೊಮ್ಮೆ ಆಡಳಿತ ಮಂಡಳಿ ಬದಲಾವಣೆ ಮಾಡಬೇಕು. 60 ಮನೆ ಬಾಬುದಾರರಿಗೆ ಸಿಗಬೇಕಾದ ಹಕ್ಕುಗಳನ್ನು ನೀಡಬೇಕು. 30 ವರ್ಷಗಳ ಅಡೀಟ್​ ರಿಪೋರ್ಟ್​ ವರದಿ ಪತ್ರವನ್ನು ಸಾರ್ವಜನಿಕವಾಗಿ ಒದಗಿಸಬೇಕು. ದೇವಸ್ಥಾನದ ಆಫೀಸ್​ನಲ್ಲಿ ಕಾರ್ಯನಿರ್ವಹಿಸುವ ಹಳೆಯ ಸಿಬ್ಬಂದಿ ವಜಾ ಮಾಡಬೇಕು ಹಾಗೂ ಹೊಸ ಸಿಬ್ಬಂದಿಗೆ ವಯೋಮಿತಿ ನಿಗದಿಪಡಿಸಬೇಕು. ದೇವಸ್ಥಾನದ ಒಳಗಡೆ ಕೆಲಸ ಮಾಡುವ ಸಿಬ್ಬಂದಿಯ ನಿವೃತ್ತಿ ವಯೋಮಿತಿ 60 ವರ್ಷಕ್ಕೆ ಕಡ್ಡಾಯಗೊಳಿಸಬೇಕು. ದೇವಸ್ಥಾನದ ಆಫೀಸ್​ನಲ್ಲಿ ಸಂಬಳ ತೆಗೆದುಕೊಂಡು ಕೆಲಸ ಮಾಡದ ಸಿಬ್ಬಂದಿಯನ್ನು ವಜಾ ಮಾಡಬೇಕು.

ಜೂ. 30ರೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮಾಲತೇಶ ಸ್ವಾಮಿ ದೇವಸ್ಥಾನದ ಆಫೀಸ್​ ಎದುರು ಶಾಂತಿಯುತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಮುಖರಾದ ನಾಗರಾಜ ತಳವಾರ, ಚಿಕ್ಕಪ್ಪ ಹಾಡೋರ, ಮಂಜಪ್ಪ ಉಪು$್ಪಣಸಿ, ನಿಂಗರಾಜ ನಾಯರ, ನಾಗರಾಜ ಬುಡಪಳ್ಳಿ, ಶಿವಪ್ಪ ಮುದ್ದಿ, ದಿಳ್ಳೆಪ್ಪ ಮುದ್ದಿಯವರ, ನಾಗರಾಜ ಮಾದರ, ನಾಗರಾಜ ಗಂಟಿ, ಕರಿಯಪ್ಪ ಸಾರಿ, ಯಲ್ಲಪ್ಪ ಐಗಳ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net