ಕರ್ಮಗಳಿಗೆ ದೇವರು ಕೊಡುವ ಫಲ

Samskruti 5
Published on

‘ಕಾಸಿಗೆ ತಕ್ಕ ಕಜ್ಜಾಯ’ ಎಂಬ ಲೋಕೋಕ್ತಿಯಂತೆ ಮನುಷ್ಯ ಒಳ್ಳೆಯ ಕರ್ಮಗಳನ್ನು ಮಾಡಿದರೆ ಒಳ್ಳೆಯ ಫಲವನ್ನು ಪಡೆಯುತ್ತಾನೆ. ಕೆಟ್ಟ ಕರ್ಮಗಳನ್ನು ಮಾಡಿದರೆ ಕೆಟ್ಟ ಫಲವನ್ನು ಪಡೆಯುತ್ತಾನೆ. ಆದರೆ ಯಾವುದೇ ಕರ್ಮದಿಂದ ಯಾವುದೇ ಫಲ ಪಡೆಯಬೇಕಾದರೆ ಮಧ್ಯದಲ್ಲಿ ಪುಣ್ಯ-ಪಾಪಗಳೆಂಬ ನಿಮಿತ್ತಗಳಿವೆ ಎಂಬುದನ್ನು ಶಾಸ್ತ್ರ ತಿಳಿಸುತ್ತದೆ. ಅಂದರೆ ದಾನ-ಧರ್ಮ-ಪರೋಪಕಾರ-ದೇವಪೂಜೆ ಮುಂತಾದ ಸತ್ಕರ್ಮಗಳನ್ನು ಮಾಡಿದಾಗ

ಅದರಿಂದ ಪುಣ್ಯ ಬರುತ್ತದೆ. ಆ ಪುಣ್ಯದ ಮೂಲಕ ಒಳ್ಳೆಯ ಫಲ ಸಿಗುತ್ತದೆ. ಕಳ್ಳತನ-ಧೂಮಪಾನ-ಮದ್ಯಪಾನ ಮುಂತಾದ ಅಸತ್ಕರ್ಮಗಳನ್ನು ಮಾಡಿದಾಗ ಅದರಿಂದ ಪಾಪ ಬರುತ್ತದೆ. ಆ ಪಾಪದ ಮೂಲಕ ಕೆಟ್ಟ ಫಲ ಸಿಗುತ್ತದೆ ಎನ್ನುವುದು ಕರ್ಮಸಿದ್ಧಾಂತ.

ಇಲ್ಲಿ ನಾವು ತಿಳಿಯಬೇಕಾದ ವಿಚಾರವೆಂದರೆ - ಆ ಪುಣ್ಯ-ಪಾಪಗಳು ಎಲ್ಲಿರುತ್ತವೆ ಎಂದು ಕೆಲವರ ಪ್ರಶ್ನೆ. ನಮ್ಮ ಭಾರತೀಯದರ್ಶನಗಳಲ್ಲಿ ನೈಯಾಯಿಕರ ನ್ಯಾಯದರ್ಶನವೂ ಒಂದು. ‘ಈ ಪುಣ್ಯ-ಪಾಪಗಳು ಆತ್ಮರಲ್ಲಿ (ಜೀವರ ಸ್ವರೂಪದಲ್ಲಿ) ಇರುತ್ತವೆ’ ಎಂಬುದಾಗಿ ಅವರು ಹೇಳುತ್ತಾರೆ. ಆದರೆ ಶ್ರೀಮಧ್ವಾಚಾರ್ಯರು ತಿಳಿಸಿಕೊಡುವಂತೆ ನಮ್ಮ ದ್ವೈತದರ್ಶನದಲ್ಲಿ ಹೇಳುವುದು ‘ಪುಣ್ಯ-ಪಾಪಗಳು ನಮ್ಮ ಮನಸ್ಸಿನಲ್ಲಿ ಇರುತ್ತವೆ’ ಎಂದು. ಪುಣ್ಯ-ಪಾಪಗಳು ನಮ್ಮ ಮನಸ್ಸಿನಲ್ಲಿರುತ್ತವೆ. ನಮ್ಮ ಕಣ್ಣಿಗೂ ಕಾಣಿಸುವುದಿಲ್ಲ. ನಮ್ಮ ಅನುಭವಕ್ಕೂ ಬರುವುದಿಲ್ಲ. ಶಾಸ್ತ್ರದಿಂದ ಮಾತ್ರ ನಾವು ಅದರ ಬಗ್ಗೆ ತಿಳಿಯಲು ಸಾಧ್ಯ.

ನೋಡಿ! ವಿಚಿತ್ರವೆಂದರೆ - ನಾನು ನೋಡುತ್ತೇನೆ, ಕೇಳುತ್ತೇನೆ ಎಂಬುದಾಗಿ ಜ್ಞಾನದ ಅನುಭವವಾಗುತ್ತದೆ. ಆ ಜ್ಞಾನ = ತಿಳಿವಳಿಕೆ ಇರುವುದೂ ನಮ್ಮ ಮನಸ್ಸಿನಲ್ಲಿಯೇ. ಅದೂ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಅದರ ಅನುಭವ ನಮಗೆ ಬರುತ್ತದೆ. ಇಚ್ಛೆ ಇರುವುದೂ ನಮ್ಮ ಮನಸ್ಸಿನಲ್ಲಿಯೇ. ಅದೂ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಅದರ ಅನುಭವವೂ ನಮಗೆ ಬರುತ್ತದೆ. ನಾನು ಇಚ್ಛೆಪಡುತ್ತಿದ್ದೇನೆ ಎನ್ನುವುದು ನಮಗೆ ಗೊತ್ತಾಗುತ್ತದೆ. ನಾನು ತಿಳಿದುಕೊಳ್ಳುತ್ತಿದ್ದೇನೆ ಎನ್ನುವುದೂ ನಮಗೆ ಗೊತ್ತಾಗುತ್ತದೆ. ಆದರೆ ನನ್ನಲ್ಲಿ ಪುಣ್ಯ ಇದೆ, ಪಾಪ ಇದೆ ಎಂದು ನಮಗೆ ಗೊತ್ತಾಗುವುದಿಲ್ಲ. ಆ ಪುಣ್ಯ-ಪಾಪಗಳ ಅನುಭವ ನಮಗೆ ಬರುವುದಿಲ್ಲ. ಜ್ಞಾನ-ಇಚ್ಛೆಗಳು ಇರುವುದೂ ಮನಸ್ಸಿನಲ್ಲಿಯೇ. ಪುಣ್ಯ-ಪಾಪಗಳು ಇರುವುದೂ ಮನಸ್ಸಿನಲ್ಲಿಯೇ. ಆದರೆ ಜ್ಞಾನ-ಇಚ್ಛೆಗಳ ಅನುಭವ ಬರುವಂತೆ, ಪುಣ್ಯ-ಪಾಪಗಳ ಅನುಭವ ನಮಗೆ ಬರುವುದಿಲ್ಲ. ಶಾಸ್ತ್ರದಿಂದ ಅದನ್ನು ತಿಳಿಯಬಹುದು ಅಷ್ಟೇ.

ನಮ್ಮ ಮನಸ್ಸಿನಲ್ಲಿರುವ ಅಂತಹ ಪುಣ್ಯ-ಪಾಪಗಳು ಜಡಪದಾರ್ಥಗಳು. ಹಾಗಾಗಿ ಅವುಗಳಿಂದಲೂ ನಮಗೆ ಫಲ ಸಿಗುವುದಿಲ್ಲ. (ಪುಣ್ಯ-ಪಾಪಗಳು ಜಡವಾದ್ದರಿಂದ ಅವು ನಮಗೆ ಫಲ ಕೊಡಲು ಸಾಧ್ಯವಿಲ್ಲ.) ಅದಕ್ಕಾಗಿ ಭಗವಂತ ಆ ಪುಣ್ಯ-ಪಾಪಗಳಿಗೆ ಅಭಿಮಾನಿಗಳಾದ ಚೇತನರನ್ನು ನಿಯಮಿಸಿದ್ದಾನೆ. ಆ ಅಭಿಮಾನಿಗಳಿಗೆ ನಿಯಾಮಕರಾಗಿ ವಾಯುದೇವರನ್ನು ನಿಯಮಿಸಿದ್ದಾನೆ. ಆ ಅಭಿಮಾನಿಗಳು, ವಾಯುದೇವರು ಎಲ್ಲರೂ ಅಸ್ವತಂತ್ರರಾದ್ದರಿಂದ ‘ಪುಣ್ಯ’ ‘ಪಾಪ’ ಎಂಬ ಹೆಸರಿನಿಂದ ಅವರೆಲ್ಲರಿಗೆ ನಿಯಾಮಕನಾಗಿ ಭಗವಂತ ತಾನೇ ಇದ್ದಾನೆ. ‘ಪುಣ್ಯೇನ ಪುಣ್ಯಂ ನಯತಿ ಪಾಪೇನ ಪಾಪಮ್ ಎಂಬ ವಾಕ್ಯವನ್ನು ವ್ಯಾಖ್ಯಾನ ಮಾಡುವಾಗ ಶ್ರೀಮಧ್ವಾಚಾರ್ಯರು ಬೃಹದಾರಣ್ಯಕಭಾಷ್ಯದಲ್ಲಿ ಈ ವಿಚಾರವನ್ನು ತಿಳಿಸುತ್ತಾರೆ. ಹಾಗಾಗಿ ನಾವು ಏನೇ ಕರ್ಮ ಮಾಡಿದರೂ ಆ ಭಗವಂತನೇ ನಮಗೆ ಫಲ ಕೊಡುವವನು. ಇದು ಕರ್ಮಸಿದ್ಧಾಂತದ ರಹಸ್ಯ. ಇದನ್ನು ತಿಳಿಯಲೇಬೇಕು.

ನಾವು ಯಾವುದೇ ಕರ್ಮ ಮಾಡಿದಾಗ ನಮ್ಮ ಮನಸ್ಸೆಂಬ ಬ್ಯಾಂಕ್​ನಲ್ಲಿ ನಮ್ಮ ಪುಣ್ಯ-ಪಾಪಗಳು ಜಮೆಯಾಗುತ್ತವೆ. ಬ್ಯಾಂಕ್​ನಲ್ಲಿ ನಮ್ಮ ಹಣವನ್ನು ನೋಡಿಕೊಳ್ಳಲು ಒಬ್ಬ ವ್ಯಕ್ತಿ ಇರುವಂತೆ, ಮನಸ್ಸೆಂಬ ಬ್ಯಾಂಕ್​ನಲ್ಲಿ ಇರುವ ನಮ್ಮ ಪುಣ್ಯ-ಪಾಪಗಳನ್ನು ನೋಡಿಕೊಳ್ಳುವುದಕ್ಕೂ ಒಬ್ಬ ಅಭಿಮಾನಿಚೇತನ ಇರುತ್ತಾನೆ. ವಿಶೇಷವೆಂದರೆ - ಎಲ್ಲ ಪುಣ್ಯಗಳನ್ನು ನೊಡಿಕೊಳ್ಳುವುದಕ್ಕೆ ಒಬ್ಬ ಅಭಿಮಾನಿಚೇತನ ಅಲ್ಲ. ಕಿಂತು ಒಂದು ಪುಣ್ಯಕ್ಕೆ ಒಬ್ಬ, ಹತ್ತು ಪುಣ್ಯಗಳಿದ್ದರೆ ಹತ್ತು ಜನ, ನೂರು ಪುಣ್ಯಗಳಿದ್ದರೆ ನೂರು ಜನ ಅಭಿಮಾನಿಚೇತನರು ಇರುತ್ತಾರೆ. ಹಾಗಾದರೆ ಒಬ್ಬ ಜೀವ ಎಷ್ಟು ಪುಣ್ಯಗಳನ್ನು ಸಂಪಾದಿಸುತ್ತಾನೆ? ಲೆಕ್ಕ ಹೇಳಲು ಆಗುವುದಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಅನಂತ! ಅಂದಮೇಲೆ ಒಬ್ಬ ಜೀವನ ಅನಂತ ಪುಣ್ಯಗಳಿಗೆ, ಅನಂತ ಪಾಪಗಳಿಗೆ ನಿಯಾಮಕರಾಗಿ ಅನಂತ ಚೇತನರಿದ್ದಾರೆ. ಅವರೆಲ್ಲರಮೇಲೆ ವಾಯುದೇವರು, ಸ್ವತಃ ಭಗವಂತ ತಾನು ಇದ್ದಾನೆ.

ಶ್ರೀಮಧ್ವಾಚಾರ್ಯರು ಈ ವಿಚಾರವನ್ನು ತಿಳಿಸಿ, ‘ಇದೊಂದು ವಿಚಾರ ಸಾಕಲ್ಲವೇ ದೇವರ ಮಹಿಮೆಯನ್ನು ತಿಳಿದುಕೊಳ್ಳುವುದಕ್ಕೆ? ಇನ್ನೇನು ಬೇಕು?’ ಎನ್ನುತ್ತಾರೆ. ದೇವರಲ್ಲಿ ಭಕ್ತಿ ಮಾಡಬೇಕಾದರೆ ದೇವರ ಮಹಿಮೆ ತಿಳಿದುಕೊಳ್ಳಬೇಕು. ದೇವರ ಮಹಿಮೆಗಳು ಬಹಳ ಬಹಳ ಇವೆ. ಆ ಮಹಿಮೆಗಳಲ್ಲಿ ಈ ಒಂದು ಮಹಿಮೆ ಸಾಕಲ್ಲವೇ? ಎಂದು ಕೇಳುತ್ತಾರೆ.

ಜೀವನ ಅನಂತ ಪುಣ್ಯ-ಪಾಪಗಳನ್ನು ನಿಯಮನ ಮಾಡುವುದಕ್ಕಾಗಿ ಅನಂತ ಅಭಿಮಾನಿಚೇತನರನ್ನು ಇಟ್ಟಿದ್ದಾನೆ. ಅವರೆಲ್ಲರಿಗೆ ನಿಯಾಮಕರಾಗಿ ವಾಯುದೇವರನ್ನು ಇಟ್ಟಿದ್ದಾನೆ. ಎಲ್ಲರಿಗೂ ಮೇಲಾಗಿ ಸ್ವತಃ ತಾನು ಇದ್ದಾನೆ. ಇದು ಕೇವಲ ಒಬ್ಬ ಜೀವನ ವಿಷಯ. ಹೀಗೆ ಜಗತ್ತಿನಲ್ಲಿ ಎಷ್ಟು ಜನ ಜೀವರಿದ್ದಾರೆ? ಜೀವರನ್ನು ಎಣಿಸಲು ಸಾಧ್ಯವೇ? ಇಲ್ಲ. ಅನಂತ ಅನಂತ ಜೀವರಿದ್ದಾರೆ. ಹಾಗಾದರೆ ಆ ಎಲ್ಲ ಅನಂತ ಅನಂತ ಜೀವರ ಅನಂತ ಅನಂತ ಕರ್ಮಗಳು, ಅವುಗಳಿಂದ ಬರುವ ಅನಂತ ಅನಂತ ಪುಣ್ಯ-ಪಾಪಗಳು, ಅವುಗಳನ್ನು ನಿಯಮಿಸಲು ಅನಂತ ಅನಂತ ಅಭಿಮಾನಿಚೇತನರು, ಆ ಅನಂತ ಅಭಿಮಾನಿಚೇತನರು ಅವರವರ ಕರ್ಮಗಳನ್ನು ಸರಿಯಾಗಿ ನೋಡಿ ಕರ್ಮಗಳಿಗೆ ಸರಿಯಾಗಿ ಫಲ ಕೊಡುತ್ತಿದ್ದಾರೆಯೋ? ಇಲ್ಲವೋ? ಇದೆಲ್ಲವನ್ನೂ ತಾನೊಬ್ಬನೇ ನೋಡಬೇಕು, ನಿಯಮಿಸಬೇಕು, ಫಲ ಕೊಡಬೇಕು.

ಇದೇನಿದು ಕರ್ಮಪ್ರಪಂಚ? ಕರ್ಮಗಳದ್ದೇ ಒಂದು ಪ್ರಪಂಚವಿದೆ ಈ ಪ್ರಪಂಚದೊಳಗೆ. ಆ ಪ್ರಪಂಚದೊಳಗಿನ ಕರ್ಮಪ್ರಪಂಚವನ್ನು ತಿಳಿಯದೇ, ಕೇವಲ ಪ್ರಾಪಂಚಿಕವಿಷಯಗಳಲ್ಲಿ ಆಸಕ್ತರಾದ ಈ ಪ್ರಪಂಚದ ಜನರಿಂದ ಆಗುವುದೇನು? ಆದ್ದರಿಂದ ಈ ಕರ್ಮಪ್ರಪಂಚವನ್ನು ತಿಳಿಯಿರಿ. ಈ ಮೂಲಕ ದೇವರ ಮಹಿಮೆಯನ್ನು ಅರ್ಥಮಾಡಿಕೊಳ್ಳಿ ಎನ್ನುತ್ತಾರೆ ಆಚಾರ್ಯರು. ಅಷ್ಟೇ ಅಲ್ಲದೆ, ದೇವರ ಮಹಿಮೆಯ ಜೊತೆಗೆ ದೇವರ ದಯೆ ಎಷ್ಟಿದೆ? ಅದನ್ನೂ ಅರ್ಥಮಾಡಿಕೊಳ್ಳಿ! ಎನ್ನುತ್ತಾರೆ.

ಇರಬಹುದು ನಮ್ಮ ಕರ್ಮ ಅನಂತ. ಆದರೆ ಆ ಎಲ್ಲ ಕರ್ಮಗಳಿಗೆ ಫಲ ಕೊಡಬೇಕು ಎಂಬ ಯಾವುದೇ ನಿಯಮ ದೇವರಿಗೆ ಇಲ್ಲ! ಕೊಡಲೂಬಹುದು, ಬಿಡಲೂಬಹುದು. ಯಾವುದಾದರೂ ವಸ್ತುವನ್ನು ತೆಗೆದುಕೊಳ್ಳುವಾಗ ನಾವು ಅದರ ರಸೀದಿ ಪಡೆದುಕೊಳ್ಳುತ್ತೇವೆ. ಹಣ ಕೊಟ್ಟಮೇಲೂ ನಮಗೆ ಆ ವಸ್ತು ಕೊಡದಿದ್ದರೆ, ಆ ರಸೀದಿ ಇಟ್ಟುಕೊಂಡು ಅವರ ಮೇಲೆ ಕೇಸ್ ಹಾಕಬಹುದು. ವಾದ ಮಾಡಬಹುದು. ಆದರೆ ನೋಡಿ! ನಾವು ಕರ್ಮ ಮಾಡಿದಾಗ ಅದಕ್ಕೆ ದೇವರು ಫಲ ಕೊಡದಿದ್ದರೆ ದೇವರ ಮೇಲೆ ಕೇಸ್ ಹಾಕಲು ಸಾಧ್ಯವೇ? ಸಾಧ್ಯವಿಲ್ಲ. ಕಾರಣ ನಾವು ಕರ್ಮ ಮಾಡಿದ್ದೇವೆ ಎಂದು ತೋರಿಸಲು ನಮ್ಮ ಬಳಿ ರಸೀದಿಯೇ ಇಲ್ಲ! ಯಾಕೆಂದರೆ ಕರ್ಮಗಳು, ಪುಣ್ಯ-ಪಾಪಗಳು ಕಣ್ಣಿಗೆ ಕಾಣಿಸುವುದೇ ಇಲ್ಲ. ನಮಗೇ ಕಾಣಿಸುವುದಿಲ್ಲ ಎಂದಮೇಲೆ ಮತ್ತೊಬ್ಬರಿಗೆ ಏನು ತೋರಿಸಲು ಸಾಧ್ಯ? ಏನು ತೋರಿಸಿ ನಾನು ಇಷ್ಟು ಕರ್ಮ (ಪುಣ್ಯ-ಪಾಪ) ಮಾಡಿದ್ದೇನೆ ಎಂದು ಸಾಬೀತುಪಡಿಸಲು ಸಾಧ್ಯ?

ಹೋಗಲಿ, ಪುಣ್ಯ-ಪಾಪಗಳನ್ನು ತೋರಿಸಲು ಆಗದಿದ್ದರೂ, ಆ ಪುಣ್ಯ-ಪಾಪಗಳಿಗೆ ಕಾರಣವಾದ ಇಂತಹ ಕರ್ಮಗಳನ್ನು ಮಾಡಿದ್ದೇವೆ ಎಂದು ಹೇಳಲು ಸಾಕ್ಷ್ಯಳನ್ನು (ದಾನ-ಧರ್ಮಗಳನ್ನು ಮಾಡುತ್ತಿರುವ ವಿಡಿಯೋ, ಫೋಟೋಗಳನ್ನು) ತೆಗೆದು, ದೇವರೆದುರಿನಲ್ಲಿಯೇ ತೋರಿಸಬಹುದು ಎಂದು ಇಟ್ಟುಕೊಳ್ಳೋಣ. ‘ನೋಡು, ನಾನು ಇಂತಹ ಸತ್ಕರ್ಮಗಳನ್ನು ಮಾಡಿದ್ದೇನೆ. ಅದಕ್ಕೆ ಸಾಕ್ಷಿಯಾಗಿ ವಿಡಿಯೋ-ಫೋಟೋಗಳು ನನ್ನ ಬಳಿ ಇವೆ ನೋಡು. ಹಾಗಾಗಿ ನನಗೆ ನೀನು ಫಲ ಕೊಡಲೇಬೇಕು’ ಎಂಬುದಾಗಿ ವಾದವನ್ನೂ ಮಾಡುತ್ತೇವೆ ಎಂದುಕೊಳ್ಳೋಣ. ಆದರೆ ಏನೂ ವಿಚಾರ ಮಾಡದೆ ನಮ್ಮ ಆ ವಿಡಿಯೋ-ಫೋಟೋ, ನಮ್ಮ ಅರ್ಜಿ ಎಲ್ಲವನ್ನೂ ದೇವರು ತಿರಸ್ಕಾರ ಮಾಡಿದರೆ (ನಾನು ಫಲ ಕೊಡುವುದಿಲ್ಲ ಎಂದು ಹೇಳಿದರೆ) - ನಾವೇನು ಮಾಡುವವರಿದ್ದೇವೆ ಹೇಳಿ? ಹೈಕೋರ್ಟ್​ನಲ್ಲಿ ಅರ್ಜಿ ತಿರಸ್ಕೃತವಾದರೆ ಸುಪ್ರೀಂಕೋರ್ಟ್​ಗೆ ಅಪೀಲ್ ಹೋಗುವಂತೆ, ದೇವರು ನಮ್ಮ ಅರ್ಜಿಯನ್ನು ತಿರಸ್ಕರಿಸಿದರೆ ಯಾರ ಬಳಿ ನಾವು ಅಪೀಲ್ ಹೋಗಬೇಕು? ಅಪೀಲ್ ಪ್ರಶ್ನೆಯೇ ಇಲ್ಲ. ಕಾರಣ ದೇವರಿಗಿಂತ ದೊಡ್ಡವನಾದ ವ್ಯಕ್ತಿಯೇ ಯಾರೂ ಇಲ್ಲ. ‘ಇವನು ಮಾಡಿದ ಕರ್ಮಕ್ಕೆ ನೀನು ಫಲ ಕೊಡಲೇಬೇಕು’ ಎಂಬುದಾಗಿ ದೇವರಿಗೆ ಆರ್ಡರ್ ಮಾಡುವ ಮೇಲಧಿಕಾರಿ ಯಾರೂ ಇಲ್ಲ.

ಹಾಗಾದರೆ ಆಲೋಚನೆ ಮಾಡಿ! ನಾವು ಮಾಡುವ ಕರ್ಮಗಳಿಗೆ ಫಲ ಕೊಡಬೇಕಾದ ಆವಶ್ಯಕತೆ ದೇವರಿಗೆ ಸ್ವಲ್ಪವೂ ಇಲ್ಲ. ಕೊಡಲೇಬೇಕಾದ ಒತ್ತಡ-ಅನಿವಾರ್ಯತೆ ಏನೂ ಇಲ್ಲ. ಆದರೆ ವಿಚಿತ್ರ ಎಂದರೆ - ದೇವರು ನಾವು ಮಾಡುವ ಒಂದು ಕರ್ಮಕ್ಕೂ ಫಲ ಕೊಡದೆ ಇರುವುದಿಲ್ಲ. ಇದು ದಯೆ ಅಲ್ಲದೇ ಇನ್ನೇನು? ಆಲೋಚಿಸಿ!

ಒಂದು ಕಡೆ ದೇವರ ಮಹಿಮೆ ಇದೆ. ಮತ್ತೊಂದು ಕಡೆ ದೇವರ ದಯೆ ಇದೆ. ದೇವರ ಮಹಿಮೆಯನ್ನು ತಿಳಿದು ದೇವರಲ್ಲಿ ಗೌರವವನ್ನು ಮಾಡಿ. ದಯೆಯನ್ನು ಅರ್ಥ ಮಾಡಿಕೊಂಡು ದೇವರಲ್ಲಿ ಪ್ರೀತಿ ಮಾಡಿ. ಆ ಪ್ರೀತಿಯೇ ಭಕ್ತಿಯಾಗುತ್ತದೆ. ಅಂತಹ ಭಕ್ತಿಯಿಂದಲೇ ನಮಗೆ ದೇವರ ಅನುಗ್ರಹ, ಮೋಕ್ಷ ಸಿಗುವುದು ಎಂಬ ಅದ್ಭುತವಾದ ವಿಚಾರವನ್ನು ಶ್ರೀಮಧ್ವಾಚಾರ್ಯರು ಅನುವ್ಯಾಖ್ಯಾನದಲ್ಲಿ ತಿಳಿಸಿಕೊಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net