ಮಾದಿಗರಿಗೆ ಸಮೀಕ್ಷೆ ಯಶಸ್ವಿಗೊಳಿಸುವ ಗುರಿ: ಮಾಜಿ ಸಚಿವ ಎಚ್.ಆಂಜನೇಯ| Unanimously six decisions

Madiga meeting
Published on

ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣ ಹಂಚಿಕೆಯಲ್ಲಿ ಸಮೀಕ್ಷೆ ನಿರ್ಣಾಯಕವಾಗಲಿದೆ. ಪರಿಶಿಷ್ಟ ಜಾತಿ, ಉಪಜಾತಿಗಳ ನಿಖರ ದತ್ತಾಂಶ ಸಂಗ್ರಹಿಸಲು ಎಸ್‌ಸಿ ಸಮೀಕ್ಷೆ ನಡೆಯಲಿದ್ದು, ಇದೊಂದೇ ಮಾದಿಗರ ಗುರಿಯಾಗಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಸಲಹೆ ನೀಡಿದರು.

ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಜನಗಣತಿ ವೇಳೆ ಮಾದಿಗರ ಪಾತ್ರವೇನು ? ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಪರಿಶಿಷ್ಟ ಜಾತಿಯಲ್ಲಿ ಕೆಲವು ನಾವು ಹೆಚ್ಚು ಸಂಖ್ಯೆಯಲ್ಲಿದ್ದೇವೆ ಎಂದು ಹೇಳುತ್ತಿದ್ದಾರೆ.

ವಾಸ್ತವವಾಗಿ ಮಾದಿಗರ ಸಂಖ್ಯೆಯೇ ಹೆಚ್ಚಿದೆ. ಆದಿಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಎಂದು ಗುರುತಿಸಿಕೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ಸಮಸ್ಯೆ ಹೋಗಲಾಡಿಸಿ, ನಿಖರ ದತ್ತಾಂಶ ಸಂಗ್ರಹಿಸಲೆಂದೇ ಎಸ್‌ಸಿ ಸಮೀಕ್ಷೆ ನಡೆಯುತ್ತಿದೆ ಎಂದು ತಿಳಿಸಿದರು.

ಒಳಮೀಸಲಾತಿ ಜಾರಿಗೆ ಒತ್ತಾಯಿಸಿ 30 ವರ್ಷಗಳಿಂದ ನಡೆಯುತ್ತಿರುವ ಹೋರಾಟ ಲಪ್ರದದ ಸಮೀಪಕ್ಕೆ ಬಂದಿದೆ. ಸಿಎಂ ಸಿದ್ದರಾಮಯ್ಯ ಅವರು ಸಮಸಮಾಜ ನಿರ್ಮಾಣಕ್ಕೆ ಒತ್ತು ನೀಡಿ, ಒಳ ಮೀಸಲಾತಿ ಕಲ್ಪಿಸಲು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.

ಹಬ್ಬ, ಉತ್ಸವ ಬೇಡ

ಮಾದಿಗ ಸಮುದಾಯಗಳು ಜಾತ್ರೆ, ಹಬ್ಬ, ಉತ್ಸವ, ಆಚರಣೆಯಲ್ಲಿ ಮುಳುಗುವ ಮುಗ್ಧರು. ಇಂಥ ಆಚರಣೆಗಳನ್ನು ಜಾತಿ ಜನಗಣತಿ ಕಾರ್ಯ ಮುಗಿಯುವವರೆಗೂ ಬದಿಗಿಡಬೇಕು. ಗಣತಿ ಕಾರ್ಯ ಪೂರ್ಣಗೊಂಡು, ಒಳಮೀಸಲಾತಿ ಜಾರಿಯಾಗುವ ತನಕ ಸಮೀಕ್ಷೆಯೊಂದೇ ಗುರಿಯಾಗಬೇಕು ಎಂದು ಸಲಹೆ ನೀಡಿದರು.

ಗಣತಿದಾರರು ಬಂದಾಗ ಸ್ವತಃ ವಿವರ ನೀಡುವ ಜತೆಗೆ ಪ್ರತಿಯೊಬ್ಬರು ಕಾಲೊನಿ, ಹಟ್ಟಿ, ಓಣಿ, ಬಡಾವಣೆಗಳಲ್ಲಿ ಸುತ್ತಮಬೇಕು. ಜಾತಿ ಕಾಲಂನಲ್ಲಿ ಮಾದಿಗ ಎಂದು ಸ್ಪಷ್ಟವಾಗಿ ಬರೆಸುವ ಕುರಿತು ಜಾಗೃತಿ ಮೂಡಿಬೇಕು ಎಂದರು.

ಒಳಮೀಸಲಾತಿ ವೇಳೆ ಮಾದಿಗ ಸಮುದಾಯಕ್ಕೆ ಹೆಚ್ಚಿನ ಪಾಲು ದೊರೆಯಲೇಬೇಕು. ಅದಕ್ಕಾಗಿ ಸಮುದಾಯದ ಎಲ್ಲರೂ ಎಚ್ಚರಿಕೆವಹಿಸಿ, ಗಣತಿದಾರರ ಜತೆ ಮನೆ, ಮನೆಗೆ ಭೇಟಿ ನೀಡಿ ಮಾದಿಗ ಎಂದು ಬರೆಯಿಸಲು ಮರೆಯಬಾರದು ಎಂದು ಎಚ್.ಆಂಜನೇಯ ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಬಸವಂತಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಗೋನಾಳ ಭೀಮಪ್ಪ, ನಿವೃತ್ತ ಐಎಎಸ್ ಅಧಿಕಾರಿ ಡಾ.ಬಾಬುರಾವ್ ಮುಡಬಿ, ಮಾಜಿ ಶಾಸಕ ಧರ್ಮಸೇನಾ ಇನ್ನಿತರರು ಇದ್ದರು.

ಮುಂದಿನ ಹೆಜ್ಜೆಗೆ ನಿರ್ಧಾರಗಳು

- ಮೇ 5 ರಿಂದ 15ರವರೆಗೆ ಮನೆ, ಮನೆಗೆ ಗಣತಿ ಕಾರ್ಯ ನಡೆಯಲಿದೆ. ಇದರಲ್ಲಿ ಭಾಗವಹಿಸಲು ಸಾಧ್ಯವಾಗದವರು ಪ್ರತಿ ಮತಗಟ್ಟೆಗಳಲ್ಲಿ ಮೇ 19 ರಿಂದ 21ರವರೆಗೆ ಖುದ್ದು ಮಾಹಿತಿ ನೀಡಬಹುದು. ಇವರೆಡರಲ್ಲಿ ತಪ್ಪಿಸಿಕೊಂಡವರು ಮೇ 19 ರಿಂದ 23ರವರೆಗೆ ಆನ್‌ಲೈನ್‌ನಲ್ಲಿ ಮಾಹಿತಿ ಸಲ್ಲಿಸಲು ಅವಕಾಶ ಬಳಸಿಕೊಳ್ಳಬೇಕು.

- ಮೇ 5 ರಿಂದ 23ರವರೆಗೆ ಮಾದಿಗ ಸಮುದಾಯದವರು ಸಭೆ, ಸಮಾರಂಭ, ಉತ್ಸವ, ಹಬ್ಬ, ಗುಂಪು ಕಾರ್ಯಕ್ರಮ ಕೈಬಿಟ್ಟು ಸಮೀಕ್ಷೆ ಪಾಲ್ಗೊಳ್ಳುವುದು ಕಡ್ಡಾಯ

- ಶಾಲಾ ಕಾಲೇಜುಗಳಲ್ಲಿ ಆದಿದ್ರಾವಿಡ, ಆದಿಕರ್ನಾಟಕ, ಆದಿಆಂಧ್ರವೆಂದು ದಾಖಲಿಸಿದ್ದರೆ ಜಾತಿ ಕಲಂ 61ರಂತೆ ಮಾದಿಗ ಎಂದು ಒಂದೇ ಜಾತಿ ಹೆಸರು ಬರೆಯಿಸಬೇಕು

- ಎಸ್‌ಸಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಲು ಸಮುದಾಯದ ಸಚಿವರು, ಮಾಜಿ ಸಚಿವರು, ಶಾಸಕರು, ಹೋರಾಟಗಾರರು ಜಿಲ್ಲಾ ಉಸ್ತುವಾರಿಗಳಾಗಿ ನೇಮಕ

- ಒಳಮೀಸಲಾತಿ ಅಧಿಕೃತವಾಗಿ ಜಾರಿಯಾದ ಬಳಿಕ ರಾಯಚೂರಿನಲ್ಲಿ ವಿಜಯೋತ್ಸವ ಆಚರಣೆ, ಸಿಎಂ ಸಿದ್ದರಾಮಯ್ಯ ಹಾಗೂ ತೆಲಂಗಾಣ ಸಿಎಂ ರೇವಂತರೆಡ್ಡಿ ಸನ್ಮಾನ ಸಮಾರಂಭ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net