ಗೋವಾ ದೇಗುಲದಲ್ಲಿ ಕಾಲ್ತುಳಿತ! 6 ಭಕ್ತಾಧಿಗಳು ದುರ್ಮರಣ, 30ಕ್ಕೂ ಹೆಚ್ಚು ಮಂದಿಗೆ ಗಾಯ | Goa Temple Stampede

ವಿಜಯವಾಣಿ - 2025-05-03T094051.260
Published on

Goa Temple Stampede: ಇಂದು (ಮೇ.03) ಗೋವಾದ ಸಿರ್ಗಾಂವ್ ಪ್ರದೇಶದ ಶ್ರೀ ಲರೈ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದ್ದು, ದುರ್ಘಟನೆಯಲ್ಲಿ ಆರು ಭಕ್ತಾಧಿಗಳು ಪ್ರಾಣ ಕಳೆದುಕೊಂಡಿದ್ದಾರೆ. 30 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಕಾಲ್ತುಳಿತದಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇತ್ತೀಚಿನ ವರದಿ ಪ್ರಕಾರ, ಪ್ರಸ್ತುತ ಮೃತಪಟ್ಟವರ ಸಂಖ್ಯೆ 6 ಆಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಶ್ರೀ ಲರೈ ದೇವಾಲಯದಲ್ಲಿ ಶುಕ್ರವಾರ ವಾರ್ಷಿಕ ಜಾತ್ರೆ ಪ್ರಾರಂಭವಾಯಿತು. ಪಾರ್ವತಿ ದೇವಿಯ ಅವತಾರವೆಂದು ಪರಿಗಣಿಸಲಾದ ದೇವತೆ ಲರೈಗೆ ಪೂಜೆ ಸಲ್ಲಿಸಲು ಗೋವಾದಾದ್ಯಂತ ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸಿದ್ದಾರೆ. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ ಹಿನ್ನೆಲೆ ಕಾಲ್ತುಳಿತ ಉಂಟಾಗಿದೆ ಎಂದು ಖಾಕಿ ಪಡೆ ತಿಳಿಸಿದೆ.

ಪ್ರತಿ ವರ್ಷ ನಡೆಯುವ ಈ ಹಬ್ಬದ ಪ್ರಮುಖ ಆಕರ್ಷಣೆ ದೊಂಡಾಚಿ ಯಾತ್ರೆ. ಈ ಯಾತ್ರೆಯ ಭಾಗವಾಗಿ, ಇಂದು ಮುಂಜಾನೆಯಿಂದಲೇ ಸಾವಿರಾರು ಭಕ್ತರು ಜಮಾಯಿಸಿದ್ದ ಕಾರಣ ದೇಗುಲದಲ್ಲಿ ಕಾಲ್ತುಳಿತ ಸಂಭವಿಸಿದೆ. ಸ್ಥಳದಲ್ಲಿ ಪೊಲೀಸರು ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿದ್ದು, ಗಾಯಾಳುಗಳನ್ನು ಗುರುತಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ. ಪ್ರಸ್ತುತ ಉತ್ತರ ಗೋವಾ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರನ್ನು ಗೋವಾ ಸಿಎಂ ಪ್ರಮೋದ್ ಸಾವಂತ್ ಭೇಟಿ ಮಾಡಿ, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net