ಮಾರುವೇಷದಲ್ಲಿ ಮಲೇಮಹದೇಶ್ವರಕ್ಕೆ ಹೋಗಿಬನ್ನಿ; ಮುಖ್ಯಮಂತ್ರಿಗೆ ಬಿಜೆಪಿ ಸವಾಲು

Siddaramaiah
Published on

ಬೆಂಗಳೂರು: ನಿಮ್ಮ ಅವಾಸ್ತವಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಟಾನದಿಂದ ಕೋಟ್ಯಂತರ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವಾಸ್ತವಿಕ ಗ್ಯಾರಂಟಿಗಳು ಜನರಿಗೆ ಎಷ್ಟರ ಮಟ್ಟಿಗೆ ಘಾಸಿಗೊಳಿಸಿದೆ ಎಂಬುದನ್ನು ತಿಳಿಯಲು, ಒಮ್ಮೆ ಮಾರುವೇಷದಲ್ಲಿ ಬೆಂಗಳೂರಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಕೆಎಸ್‌ಆರ್‌ಟಿಸಿ ಕೆಂಪು ಬಸ್‌ನಲ್ಲಿ ಹೋಗಿ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯ ಬಿಜೆಪಿ ಸವಾಲು ಹಾಕಿದೆ.

ಭ್ರಷ್ಟ ಹಾಗೂ ಭಂಡ ಸಿದ್ದರಾಮಯ್ಯ ಅವರೆ, ನಿಮ್ಮ ಅವಾಸ್ತವಿಕ ಗ್ಯಾರಂಟಿಗಳು ಮಹಾದೇಪ್ಪರಿಗೂ ತಲುಪುತ್ತಿಲ್ಲ, ಕಾಕಾ ಪಾಟೀಲರಿಗೂ ತಲುಪುತ್ತಿಲ್ಲ. ಅಷ್ಟಕ್ಕೂ ನಿಮ್ಮ ಅವಾಸ್ತವಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಟಾನಕ್ಕೆ ಹಣವನ್ನು ಜನಸಾಮಾನ್ಯರ ತೆರಿಗೆಯಿಂದ ಭರಿಸುತ್ತಿದ್ದಿರೆ ಹೊರತು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಭವನದ ಇಡುಗಂಟಿನಿಂದಲ್ಲ ಎಂದು ಮಾತಲ್ಲೇ ತಿವಿದಿದೆ.

ಬಿಜೆಪಿಯವರು ಗ್ಯಾರಂಟಿಗಳನ್ನು ಬಳಸಬಾರದು ಎಂಬುದು ನಿಮ್ಮ ಸಂಕುಚಿತ ಮನಸ್ಸಿನ ಒಳಾರ್ಥವಾದರೆ, ಬಿಜೆಪಿಯವರು ತೆರಿಗೆ ಸಹ ಪಾವತಿಸಬೇಡಿ ಎಂದು ಟ್ವೀಟ್ ಮಾಡಿಬಿಡಿ ಎಂದು ಕುಟುಕಿದೆ.

ಇದಕ್ಕೂ ಮುನ್ನ ಸಿದ್ದರಾಮಯ್ಯ ಗ್ಯಾರಂಟಿ ವಿಚಾರವಾಗಿ ಬಿಜೆಪಿಯನ್ನು ಟೀಕಿಸಿದ್ದರು. ಈ ಬಿಜೆಪಿಯವರಿಗೆ, ಗ್ಯಾರಂಟಿ ವಿರೋಧಿಗಳಿಗೆ ನಾನು ನೇರವಾಗಿ ಒಂದು ಪ್ರಶ್ನೆ ಕೇಳುತ್ತಿದ್ದೀನಿ. ರಾಜ್ಯದಲ್ಲಿ ಬಿಜೆಪಿಯವರು ನಮ್ಮ ಗ್ಯಾರಂಟಿಗಳ ಫಲಾನುಭವಿಗಳಲ್ಲವಾ? ಬಿಜೆಪಿಯವರು ಉಚಿತವಾಗಿ ಬಸ್ಸಲ್ಲಿ ಓಡಾಡುತ್ತಿಲ್ಲವಾ? ಬಿಜೆಪಿಯವರು ಉಚಿತ ವಿದ್ಯುತ್ ಪಡೆಯುತ್ತಿಲ್ಲವಾ? ಬಿಜೆಪಿಯವರು ಗೃಹಲಕ್ಷ್ಮಿ ಹಣ ಪಡೆಯುತ್ತಿಲ್ಲವಾ? ಇಲ್ಲಾ, ನಾವು ತೆಗೆದುಕೊಳ್ಳುತ್ತಿಲ್ಲ ಇಲ್ಲ ಎಂದು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ ಎಂದಿದ್ದರು.

ಜತೆಗೆ ಬಿಜೆಪಿಯವರು ರಾಜ್ಯ ಸರ್ಕಾರದ ಗ್ಯಾರಂಟಿ ಫಲಾನುಭವಿಗಳನ್ನು ಅವಮಾನಿಸಿ, ಅಪಪ್ರಚಾರ ಮಾಡುವುದನ್ನು ನಿಲ್ಲಿಸದಿದ್ದರೆ ಕೋಟಿ ಕೋಟಿ ಫಲಾನುಭವಿಗಳು ನಿಮಗೆ ಸರಿಯಾದ ಪಾಠ ಕಲಿಸುತ್ತಾರೆಂದಿದ್ದರು. ಈ ಮಾತು ಸಾರ್ವಜನಿಕ ವಲಯದಲ್ಲೂ ತೀವ್ರ ವಿಶ್ಲೇಷಣೆಗೊಳಗಾಗಿತ್ತು. ಜಾಲತಾಣದಲ್ಲಿ ಟೀಕೆಗೂ ಒಳಗಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net