

ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿಗೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಅಭಿಯಾನ ಆರಂಭಿಸಿದೆ.
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಿಟ್ಲರ್ ಅಮಿತ್ ಷಾ ಗೋಬ್ಯಾಕ್ ಎಂದು ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಪೋಸ್ಟ್ ಮಾಡಿ ಅಭಿಯಾನ ನಡೆಸುತ್ತಿದ್ದಾರೆ.
ಕಾರ್ಯಕರ್ತರು ಪೋಸ್ಟ್ಗಳನ್ನು ಫೇಸ್ಬುಕ್, ಟ್ವೀಟರ್ ಸೇರಿದಂತೆ ಇತರ ಜಾಲತಾಣಗಳಲ್ಲಿ ಹಂಚಿಕೆ ಮಾಡುತ್ತಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಹುಬ್ಬಳ್ಳಿ ನಗರದ ನೆಹರು ಮೈದಾನದಲ್ಲಿ ಪೌರತ್ವ ಕಾಯ್ದೆ ಜಾರಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಆಗಮಿಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಹಾದಾಯ ವಿಚಾರ ಹಾಗೂ ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಪ್ಪು ಬಲೂನ್ ಚಳವಳಿ: ಕಾಯ್ದೆ ಬಗ್ಗೆ ಸಚಿವರು ಮಾತನಾಡುವುದು ಬೇಡ, ಸಮಸ್ಯೆಗಳ ಬಗ್ಗೆ ಮಾತನಾಡಲಿ ಎಂದು ಕೆಲವರು ಕಪ್ಪುಬಣ್ಣದ ಬಲೂನ್ಗಳಿಗೆ ಗಾಳಿ ತುಂಬಿ ಆಕಾಶಕ್ಕೆ ಹಾರಿಬಿಟ್ಟು ಚಳವಳಿ ನಡೆಸುತ್ತಿದ್ದಾರೆ.