ಗ್ರಾಪಂಗಳನ್ನು ಆರ್ಥಿಕ ಸ್ವಾವಲಂಬಿ ಪಂಚಾಯಿತಿಗಳನ್ನಾಗಿ ರೂಪಿಸಲು ಕ್ರಮ

AWARD
Published on

ಬೆಂಗಳೂರು:
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ಆರ್ಥಿಕ ಸ್ವಾವಲಂಬಿ ಪಂಚಾಯಿತಿಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಗ್ರಾಮೀಣಾಭಿವೃದ್ಧಿ ಇಲಾಖೆ ಮುಂದಾಗಿದೆ.
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಆಸ್ತಿಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಆದಾಯ ಸೃಷ್ಟಿ ಮಾಡಿಕೊಳ್ಳಲು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುತ್ತಿಲ್ಲ. ಆಸ್ತಿಗಳನ್ನು ಉಳಿಸಿಕೊಳ್ಳಲು ಮತ್ತು ಮರು ಮೌಲ್ಯಮಾಪನ ಮಾಡಲು ಸರಿಯಾದ ಕ್ರಮ ಆಗಿಲ್ಲ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.
ರಾಜ್ಯದಲ್ಲಿರುವ 5954 ಗ್ರಾಮ ಪಂಚಾಯಿತಿಗಳಲ್ಲಿ ಬಹುಪಾಲು ಗ್ರಾಮ ಪಂಚಾಯಿತಿಗಳು ಸರ್ಕಾರದ ಅನುದಾನವನ್ನೆ ಅವಲಂಬಿಸಿ ನಡೆಯುತ್ತಿವೆ. ಬೀದಿ ದೀಪಗಳ ವಿದ್ಯುತ್ ಬಿಲ್ ಕಟ್ಟಲು ಪರದಾಡಬೇಕಾಗಿರುವ ಪರಿಸ್ಥಿತಿ ಹಲವು ಪಂಚಾಯಿತಿಗಳಲ್ಲಿದೆ. ಈ ಸಮಸ್ಯೆ ಸುಳಿಯಿಂದ ಗ್ರಾಪಂಗಳನ್ನು ಹೊರ ತರಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.
ಬೆಂಗಳೂರು ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳು ಆರ್ಥಿಕವಾಗಿ ಸಧೃಢವಾಗಿವೆ. ಇಲ್ಲಿಯ ಭೂಮಿಗೆ ಚಿನ್ನದಂತ ಬೆಲೆ ಇರುವ ಕಾರಣ ಆರ್ಥಿಕ ಸಂಪನ್ಮೂಲ ಹೆಚ್ಚಾಗಿದೆ. ಶೇ.21ರಷ್ಟು ಪಂಚಾಯಿತಿಗಳು ಅಂಗಡಿ ಮುಂಗಟ್ಟುಗಳನ್ನು ನಿರ್ಮಾಣ ಮಾಡಿಕೊಂಡು ಮತ್ತು ಆಸ್ತಿಗಳನ್ನು ಸರಿಯಾಗಿ ನಿಭಾಯಿಸುತ್ತಿರುವುದರಿಂದ ಅವುಗಳ ಆರ್ಥಿಕ ಸಂಪನ್ಮೂಲ ಉತ್ತಮಗೊಂಡಿದೆ ಎನ್ನುವ ವರದಿಗಳಿವೆ.
ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಆಸ್ತಿ ನಿರ್ವಹಣೆ ಮಾಡುತ್ತಿರುವ ವರದಿಯನ್ನು ಪ್ರತಿ ತ್ರೈಮಾಸಿಕಕ್ಕೊಮ್ಮೆ ಪರಿಶೀಲನೆ ಮಾಡಿ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾ ಪಂಚಾಯಿತಿಗಳಿಗೆ ಸೂಚಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಕ್ರಮ ಕೈಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net