

ಕಡೂರು: ಜಾಗತಿಕವಾಗಿ ಯೋಗಕ್ಕೆ ಹೆಚ್ಚಿನ ಮನ್ನಣೆ ಸಿಕ್ಕಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವಲ್ಲಿ ಯೋಗದ ಪಾತ್ರ ಮಹತ್ವದ್ದು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.
ಮಚ್ಚೇರಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಯೋಗ ತೀರ್ಪುಗಾರರ ಪುನಶ್ಚೇತನ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅಧಿಕೃತವಾಗಿ ಆರಂಭಿಸಿತು. ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆಯಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ಹೆಚ್ಚಿನ ಮಹತ್ವ ದೊರಕಿರುವುದು ದೇಶದ ಕೀರ್ತಿ ಮತ್ತಷ್ಟು ಹೆಚ್ಚಿಸಿದಂತಾಗಿದೆ ಎಂದರು.
ಬಿಜೆಪಿ ಮುಖಂಡ ದಾನಿ ಉಮೇಶ್ ಮಾತನಾಡಿ, ಯೋಗದಿಂದ ಕೇವಲ ಆರೋಗ್ಯದ ಸುಧಾರಣೆ ಮಾತ್ರವಲ್ಲ, ಆರ್ಥಿಕವಾಗಿಯೂ ಲಾಭ ತರುವಂಥದ್ದಾಗಿದೆ. ಇಂದು ದೇಶದ ಬಹುತೇಕ ಜನರು ಯೋಗದಿಂದಲೇ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಡೂರಿನ ರಾಘವೇಂದ್ರ ಯೋಗಾ ಕೇಂದ್ರವು ಯೋಗದ ಮಹತ್ವವನ್ನು ಸಾರುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.
ಈ ಸಂದರ್ಭದಲ್ಲಿ 120 ಜನ ಶಿಬಿರಾರ್ಥಿಗಳಿಗೆ ಮತ್ತು ಪರೀಕ್ಷೆ ಬರೆದ 60 ರೆಫ್ರಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಅಸೋಸಿಯೇಷನ್(ಕೆಎಸ್‌ಎವೈಎಸ್‌ಎ) ಅಧ್ಯಕ್ಷ ಜಿ.ಎನ್.ಕೃಷ್ಣಮೂರ್ತಿ, ಕಾರ್ಯದರ್ಶಿ ಕೆ.ಪ್ರಭು, ಜಂಟಿ ಕಾರ್ಯದರ್ಶಿ ಎ.ನಟರಾಜ್, ಖಜಾಂಚಿ ಪಿ.ಆರ್.ಕೃಷ್ಣಮೂರ್ತಿ, ಸಂಜೀವ್ ಕುಮಾರ್ ಹಡಗಲಿ, ಸುರುಚಿ ನರೇಂದ್ರ, ಗ್ರಾಪಂ ಸದಸ್ಯ ಮಲಿಯಪ್ಪ, ವಿಜಯಲಕ್ಷ್ಮೀಶೇಖರಪ್ಪ, ಯೋಗಕೇಂದ್ರದ ಶಿಕ್ಷಕಿ ವಿಜಯಾ ಗಿರೀಶ್ ಮತ್ತಿತರರಿದ್ದರು.