

ಶಿವಮೊಗ್ಗ: ಭಾರತದಲ್ಲಿ ಪ್ರತಿ ತಿಂಗಳು 250ಕ್ಕೂ ಅಧಿಕ ಹೊಸ ಔಷಧೀಯ ಬ್ರಾಂಡ್‌ಗಳು ಹೊರಬರುತ್ತಿದ್ದು ನಾವೀನ್ಯತೆ ಮತ್ತು ಪೇಟೆಂಟ್ ಇದ್ದಾಗ ಮಾತ್ರ ಜಾಗತಿಕವಾಗಿ ಸ್ಪರ್ಧೆ ನೀಡಲು ಸಾಧ್ಯ ಎಂದು ಜಗದಾಲೆ ಇಂಡಸ್ಟ್ರೀಸ್ ಮಾರುಕಟ್ಟೆ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಕೆ.ಎಲ್.ಶಿವಕುಮಾರ್ ಹೇಳಿದರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರ ಹಾಗೂ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಶನಿವಾರ ಫಾರ್ಮಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪೇಟೆಂಟ್ ಫೈಲಿಂಗ್ ಮತ್ತು ನಾವೀನ್ಯ ಯೋಚನೆಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
1970ರ ಪೇಟೆಂಟ್ ಕಾಯ್ದೆಯಿಂದ ಭಾರತ ಔಷಧೀಯ ಕ್ಷೇತ್ರದಲ್ಲಿ ಉತ್ಪನ್ನಗಳ ಸ್ವಾವಲಂಬನೆ ಪಡೆಯಿತು. ನಮ್ಮ ದೇಶದ ಔಷಧ ವಿಜ್ಞಾನಿಗಳ ನಿರಂತರ ಶ್ರಮ ಈ ಸಾಧನೆಗೆ ಕಾರಣವಾಗಿದೆ. ಭಾರತದಲ್ಲಿ ಮೂರು ಸಾವಿರ ಔಷಧೀಯ ಕಂಪನಿಗಳು ಹತ್ತು ಸಾವಿರ ಕಾರ್ಖಾನೆಗಳಿವೆ. ಈ ಮೂಲಕ ಭಾರತದ ಫಾರ್ಮಸಿ ಕ್ಷೇತ್ರ ಅತ್ಯಧಿಕ ಉದ್ಯೋಗವಕಾಶ ಮತ್ತು ಸಂಶೋಧನಾ ಅವಕಾಶಗಳನ್ನು ಹೊಂದಿದೆ ಎಂದರು.
ಪದವಿ ಪಡೆದು ಕಾಲೇಜಿನಿಂದ ಹೊರಬಂದ ನಂತರ ಬದುಕಿನ ನಿಜವಾದ ಅರ್ಥ ತಿಳಿಯುತ್ತದೆ. ಪ್ರತಿ ದಿನವು ಆರೋಗ್ಯ ಕ್ಷೇತ್ರ ಸವಾಲುಗಳನ್ನು ಎದರಿಸುತ್ತಿದೆ. ಅಂತಹ ಸವಾಲುಗಳಿಗೆ ನಾವೀನ್ಯತೆಯ ಪರಿಹಾರ ನೀಡಬೇಕಾಗಿದೆ. ಅಂತಹ ನಾವೀನ್ಯಯುತ ಚಿಂತನೆಗಳು ನಿಮ್ಮದಾಗಲಿ. ರೋಗಗಳ ನಿವಾರಣೆ ಮತ್ತು ಆರೈಕೆಯಲ್ಲಿ ಫಾರ್ಮಸಿಯ ನಾವೀನ್ಯಯುತ ಯೋಜನೆಗಳ ಅವಶ್ಯಕತೆಯ ಅರಿವು ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎನ್‌ಇಎಸ್‌ನ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಜಗದಾಲೆ ಇಂಡಸ್ಟ್ರೀಸ್ ನಿಯಂತ್ರಕ ವ್ಯವಹಾರಗಳ ಸಹಾಯಕ ವ್ಯವಸ್ಥಾಪಕಿ ಸಿ.ವಿ.ಲತಾ ಮಾತನಾಡಿದರು. ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ನಾವೀನ್ಯತೆ ಮತ್ತು ಸಂಶೋಧನೆ ಕೇಂದ್ರದ ಸಂಯೋಜಕ ಕೆ.ಎಲ್.ಅರುಣ್‌ಕುಮಾರ್, ಸಿ.ಎಂ.ನೃಪತುಂಗ ಉಪಸ್ಥಿತರಿದ್ದರು.