

ತೀರ್ಥಹಳ್ಳಿ: ಇಲ್ಲಿನ ತಾಲೂಕು ಕಚೇರಿಯಲ್ಲಿ ಸಕಾಲದಲ್ಲಿ ಸಾರ್ವಜನಿಕರ ಕೆಲಸಗಳು ನಡೆಯದಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಸೋಮವಾರ ಕಂದಾಯ ಇಲಾಖೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಕೇದಿಗೆರೆ ಮಹಿಳೆಯೊಬ್ಬರ ಭೂ ದಾಖಲೆಗಳಿಗೆ ಸಂಭಂಧಿಸಿ ನ್ಯಾಯಾಲಯದ ಆದೇಶದ ಹೊರತಾಗಿಯೂ ಸದರಿಯವರ ಜಮೀನಿನ ಹಕ್ಕುಪತ್ರವನ್ನು ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಸಬೂಬು ಹೇಳದೆ ದಾಖಲೆಯನ್ನು ವಿತರಿಸಬೇಕು ಎಂದು ತಾಕೀತು ಮಾಡಿದರು.
ತಾಲೂಕು ಕಚೇರಿಯ ಸಿಬ್ಬಂದಿ ಕೆಲಸದಲ್ಲಿ ತಮಗೆ ನೆರವಾಗಲು ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಂಡಿರುವ ಬಗ್ಗೆ ಗರಂ ಆದರು. ರೆಕಾರ್ಡ್ ರೂಮಿನಲ್ಲಿ ಅನಧಿಕೃತ ವ್ಯಕ್ತಿಗಳಿಂದ ಆಗಬಹುದಾದ ಹಾನಿಯ ಬಗ್ಗೆ ಯಾರು ಹೊಣೆಗಾರರು, ಇವರನ್ನು ನೇಮಕ ಮಾಡಿಕೊಂಡವರು ಯಾರು ಎಂದು ಪ್ರಶ್ನಿಸಿದರು.
ಈ ಕಚೇರಿಯಲ್ಲಿ ಮಧ್ಯವರ್ತಿಗಳಿಂದಾಗಿ ಭ್ರಷ್ಟಾಚಾರ ಮಿತಿ ಮೀರಿದೆ. ತಾಲೂಕಿನ ದಾಖಲೆಗಳು ಜೆರಾಕ್ಸ್ ಅಂಗಡಿಯಲ್ಲಿ ಹೋಟೆಲ್‌ಗಳಲ್ಲಿ ಸಿಗುವಂತಾಗಿದೆ. ಕಚೇರಿಯಲ್ಲಿ ಶ್ರೀಸಾಮಾನ್ಯರನ್ನು ಅಲೆಸುವ ನೀವು ಮಧ್ಯವರ್ತಿಗಳ ಮಾತಿಗೆ ಮಣೆ ಹಾಕುತ್ತೀರಿ ಎಂದು ಕೆಲ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳು ವಿಲೇವಾರಿ ಆಗದಿರುವ ಬಗ್ಗೆ ಶಾಸಕರ ಗಮನಕ್ಕೆ ತರಲಾಯಿತು.
ತಹಸೀಲ್ದಾರ್ ಎಸ್.ರಂಜಿತ್ ಮಾತನಾಡಿ, ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ದಾಖಲೆಗಳ ತುರ್ತು ವಿತರಣೆಗೆ ವಿಳಂಬವಾಗುತ್ತಿದೆ. ಬಿಲ್ಲಿಂಗ್‌ನ ಆರು ಸಿಬ್ಬಂದಿ ನಿಯೋಜನೆಯ ಮೇಲೆ ಬೆಂಗಳೂರಿಗೆ ಹೋಗಿದ್ದು, ವೇತನ ತಡೆ ಹಿಡಿದಿದ್ದರೂ ಕ್ಯಾರೇ ಎನ್ನುತ್ತಿಲ್ಲ. ಕೆಲ ಸಿಬ್ಬಂದಿ ಪ್ರಭಾವ ಬಳಸಿ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ. ಒಬ್ಬ ಡಿ ದರ್ಜೆ ನೌಕರ ಇದ್ದಾರೆ ಎಂದರು.
ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಹುಂಚದಕಟ್ಟೆ ವೆಂಕಟೇಶ್, ಪ್ರಶಾಂತ್ ಕುಕ್ಕೆ, ತಳಲೆ ಪ್ರಸಾದ್ ಶೆಟ್ಟಿ ಇದ್ದರು.