

ಆನಂದಪುರ: ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೆ ಪಠ್ಯದಷ್ಟೇ ಮಹತ್ವ ನೀಡಬೇಕು ಎಂದು ಯಡೇಹಳ್ಳಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ ತಿಳಿಸಿದರು.
ಸಮೀಪದ ಯಡೇಹಳ್ಳಿಯ ಇಂದಿರಾ ಗಾಂಧಿ ವಸತಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ 17 ವರ್ಷದೊಳಗಿನವರ ಪ್ರೌಢಶಾಲಾ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ಕಬಡ್ಡಿ ಮತ್ತು ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಶಾಲಾ ಹಂತದಲ್ಲಿಯೇ ಕ್ರೀಡೆಗಳಿಗೆ ಸಾಕಷ್ಟು ತರಬೇತಿ ಮತ್ತು ಪಂದ್ಯಗಳಲ್ಲಿ ಭಾಗವಹಿಸುವ ಅವಕಾಶ ನೀಡಬೇಕು. ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಕಾರಣ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕಾರಣವಾಗುತ್ತದೆ. ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮಕ್ಕಳು ಕ್ರಿಯಾಶೀಲವಾಗಿದ್ದು, ವ್ಯಾಸಂಗದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳುತ್ತಾರೆ ಎಂದರು.
ಆಚಾಪುರ ಗ್ರಾಪಂ ಅಧ್ಯಕ್ಷ ಖಲೀಮುಲ್ಲಾ ಖಾನ್ ಮಾತನಾಡಿ, ಕ್ರೀಡೆಗಳಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಸಾಧಕ ಮಕ್ಕಳ ಕ್ರೀಡಾ ಚಟುವಟಿಕೆಗಳನ್ನು ಸಹ ಅಂಕಪಟ್ಟಿಯಲ್ಲಿ ನಮೂದಿಸಬೇಕು ಎಂದರು.
ಯಡೇಹಳ್ಳಿ ಗ್ರಾಪಂ ಉಪಾಧ್ಯಕ್ಷ ಗಣಪತಿ, ಸದಸ್ಯರಾದ ಅರುಣ ಗೌಡ, ನ್ಯಾರಿ ಲೋಕಪ್ಪ, ವೀಣಾ, ಜ್ಯೋತಿ, ಸಾಗರ ಬಿಇಒ ಪರಶುರಾಮಪ್ಪ, ದೈಹಿಕ ಶಿಕ್ಷಣಾಧಿಕಾರಿ ಎಂ.ಪ್ರಕಾಶ್, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಎ.ಎಚ್.ಭೂಮೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಂಜನಪ್ಪ, ಸಾಗರ ತಾಲೂಕು ಅಧ್ಯಕ್ಷ ಲಕ್ಷ್ಮಣ ನಾಯಕ್, ಸಾಗರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್, ಎಚ್.ರಾಜ, ಜಿ.ಮಹಾಬಲೇಶ್ವರ, ಬಿ.ಓಂಕಾರಪ್ಪ, ಚಂದ್ರಪ್ಪ, ಟಿ.ಪಿ.ಸುಬ್ರಹ್ಮಣ್ಯ, ಚಂದ್ರಶೇಖರ್ ಇತರರಿದ್ದರು.