

ಭದ್ರಾವತಿ: ಬಗರ್‌ಹುಕುಂ ರೈತರಿಗೆ ಸಾಗುವಳಿ ಹಕ್ಕು ಮಾನ್ಯ ಮಾಡಬೇಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್ ನೀಡುತ್ತಿರುವ ಕಿರುಕುಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ರೈತ ಮುಖಂಡ ಕೆ.ಟಿ.ಗಂಗಾಧರ್ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಮಂಗಳವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಗರ್ ಹುಕುಂ ನೆಪವೊಡ್ಡಿ ರೈತರ ಜಮೀನುಗಳನ್ನು ಕಿತ್ತುಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಬೆಳೆದ ಅಡಕೆ, ತೆಂಗು, ಶುಂಠಿ ಇನ್ನಿತರ ಬೆಳೆಗಳನ್ನು ನಾಶ ಮಾಡುವ ಮೂಲಕ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. 50 ವರ್ಷಗಳಿಂದಲೂ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ್ ದಳವಾಯಿ ಅವರಿಗೆ ಕೃಷಿ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ. ಅವರ ತೀರ್ಮಾನಗಳು ರೈತರಲ್ಲಿ ಗೊಂದಲ ಸೃಷ್ಟಿಸಿವೆ. ರೈತರಿಂದ ಭೂಮಿ ಕಸಿದು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡುವ ಹುನ್ನಾರ ನಡೆಯುತ್ತಿದೆ. ಕೂಡಲೇ ಕೃಷಿ ಬೆಲೆ ಆಯೋಗದ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಬಡವರು, ರೈತರು, ಕೂಲಿ ಕಾರ್ಮಿಕರು ಗ್ರಾಮೀಣ ಭಾಗದಲ್ಲಿ ವ್ಯವಸಾಯ ಹಾಗು ವ್ಯವಸಾಯೇತರ ಕಾರಣಕ್ಕಾಗಿ ಕೆಲವು ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆದಿದ್ದಾರೆ. ಸಾಲ ವಸೂಲಾತಿಗಾಗಿ ಕೃಷಿ ಉಪಕರಣಗಳು, ಮನೆಗಳನ್ನು ಜಪ್ತಿ ಮಾಡುವುದು, ಮನೆಗಳ ಮೇಲೆ ಸಾಲಗಾರ ಎಂದು ಬರೆಯುವ ಮೂಲಕ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಇದರಿಂದ ರೈತರು, ಬಡವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಾಲ ವಸೂಲಿಗಾಗಿ ಗೂಂಡಾಗಿರಿ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಡಿ.ವಿ.ವೀರೇಶ್, ಹಾಲೇಶಪ್ಪ ಗೌಡ, ಈರಪ್ಪ ಪ್ಯಾಟಿ, ಯಶವಂತರಾವ್ ಘೋರ್ಪಡೆ, ಹಿರಣ್ಣಯ್ಯ, ಎಚ್.ಎಸ್.ಮಂಜುನಾಥೇಶ್ವರ, ಮೋಹನ್ ಇತರರಿದ್ದರು.