ರೈತನ ಕುಟುಂಬಕ್ಕೆ ಶೀಘ್ರ ಪರಿಹಾರ ಕೊಡಿ

skp vijendra
ಮೃತ ರೈತ ಬಸವರಾಜಪ್ಪ ಅವರ ನೆಲವಾಗಿಲು ಮನೆಗೆ ಶಾಸಕ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಕೆ.ಎಸ್.ಗುರುಮೂರ್ತಿ, ನಿಂಬೆಗೊಂದಿ ಸಿದ್ಲಿಂಗಪ್ಪ ಇತರರಿದ್ದರು.
Published on

ಶಿಕಾರಿಪುರ: ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ನೆಲವಾಗಿಲು ಗ್ರಾಮದ ಮೃತ ರೈತ ಬಸವರಾಜಪ್ಪ ಅವರ ಮನೆಗೆ ಸೋಮವಾರ ಶಾಸಕ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ, ಕಳೆದ ವರ್ಷದ ಬರಗಾಲದ ಹೊಡೆತದಿಂದ ರೈತರು ಇನ್ನೂ ಹೊರಬಂದಿಲ್ಲ. ಕಳೆದ ವರ್ಷ ಸಾಲ ಮಾಡಿ ಕೃಷಿ ಮಾಡಿದ್ದರೂ ಬೆಳೆ ಬಾರದೆ ರೈತರು ಕಂಗಾಲಾಗಿದ್ದಾರೆ. ಮೆಕ್ಕೆಜೋಳ ಸಂಪೂರ್ಣ ನಾಶವಾಗಿದೆ. ಇದರಿಂದ ರೈತರಿಗೆ ಆರ್ಥಿಕ ಹೊರೆಯಾಗಿದೆ ಎಂದರು.
ಪರಿಹಾರದ ಬಗ್ಗೆ ನಾನು ಈಗಲೇ ಉಪವಿಭಾಗಾಧಿಕಾರಿ ಸೇರಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ರೈತರು ಅಗತ್ಯ ದಾಖಲೆಗಳನ್ನು ಒದಗಿಸಿದರೆ ಸರ್ಕಾರದಿಂದ ಶೀಘ್ರ ಪರಿಹಾರ ಒದಗಿಸಲು ಪ್ರಯತ್ನ ಮಾಡುತ್ತೇನೆ. ರೈತರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಇಬ್ಬರು ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಿ. ನಿಮ್ಮೊಂದಿಗೆ ಸಮಾಜ ಇದೆ ಎಂದು ಧೈರ್ಯ ತುಂಬಿದರು.
ಸ್ಥಳದಲ್ಲಿಯೇ ಉಪವಿಭಾಗಾಧಿಕಾರಿ, ಕೃಷಿ ಅಧಿಕಾರಿಗಳ ಜತೆಗೆ ಮಾತನಾಡಿ, ಮೃತ ರೈತನ ಕುಟುಂಬಕ್ಕೆ ಪರಿಹಾರ ಶೀಘ್ರ ದೊರಕಿಸಿಕೊಡುವ ನಿಟ್ಟಿನಲ್ಲಿ ರೈತ ಆತ್ಮಹತ್ಯೆ ಪರಿಹಾರ ಪರಿಶೀಲನಾ ಸಭೆಯಲ್ಲಿ ಚರ್ಚಿಸಬೇಕು. ಅವರಿಗೆ ಸರ್ಕಾರದಿಂದ ರೈತ ಆತ್ಮಹತ್ಯೆಗೆ ನಿಗದಿಯಾದ ಮೊತ್ತವನ್ನು ಮಾನವೀಯತೆ ನೆಲೆಗಟ್ಟಿನ ಮೇಲೆ ಒದಗಿಸಬೇಕು. ಮೃತರ ಕುಟುಂಬದಲ್ಲಿ ಗಂಡು ಮಕ್ಕಳಿಲ್ಲ. ಹೀಗಾಗಿ ಅವರ ಕೆಲಸಕ್ಕೆ ಮೊದಲ ಆದ್ಯತೆ ನೀಡಿ ಪರಿಹಾರ ದೊರಕಿಸಿಕೊಡುವಂತೆ ಸೂಚಿಸಿದರು. ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಿಂಬೆಗೊಂದಿ ಸಿದ್ಲಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net