ಮಹದಾಯಿ ಯೋಜನೆಗೆ ಅನುಮತಿ ನೀಡಿ: ಬಸವರಾಜಪ್ಪ

Basavarajappa
ಎಚ್.ಆರ್.ಬಸವರಾಜಪ್ಪ, ರೈತ ಸಂಘದ ರಾಜ್ಯಾಧ್ಯಕ್ಷ
Published on

ಶಿವಮೊಗ್ಗ: ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂಬುದನ್ನೂ ಸೇರಿದಂತೆ ಸುಮಾರು 25 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ನ.26ರ ಬೆಳಗ್ಗೆ 10ಕ್ಕೆ ಡಿಸಿ ಕಚೇರಿ ಎದುರು ಎಚ್ಚರಿಕಾ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಕಾರ್ಮಿಕರ ಸಮಸ್ಯೆಗಳು ಬಗೆಹರಿದಿಲ್ಲ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆಯಿಲ್ಲ. ಕಾರ್ಮಿಕರಿಗೆ ಕನಿಷ್ಠ ವೇತನವಿಲ್ಲ. ವಿದೇಶಿ ಕಂಪನಿಗಳ ಮಾಲ್ ಸಂಸ್ಕೃತಿಯಿಂದ ಸ್ಥಳೀಯ ವ್ಯಾಪಾರಸ್ಥರು, ರೈತರು ಸಂಕಷ್ಟದಲ್ಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತು ತಪ್ಪಿವೆ. ಚುನಾವಣೆ ಮತ್ತು ರೈತರ ಹೋರಾಟದ ಸಂದರ್ಭಗಳಲ್ಲಿ ಲಿಖಿತ ರೂಪದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ರಾಜ್ಯ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿಲ್ಲ. ಹೀಗಾಗಿ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಾರ್ಮಿಕ ಸಂಘಟನೆಗಳ ಒಕ್ಕೂಟ ಜೆಸಿಟಿಯು ದೇಶದ 500 ಜಿಲ್ಲೆಗಳಲ್ಲಿ ಎಚ್ಚರಿಕಾ ರ‌್ಯಾಲಿ ನಡೆಸಲು ನಿರ್ಧರಿಸಿವೆ ಎಂದರು.

ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧ ಮಾಡಬೇಕು. ಬೆಳೆ ವಿಮೆ ಜಾರಿಯಾಗಬೇಕು. ವಿದ್ಯುತ್ ಖಾಸಗೀಕರಣ ಕೈ ಬಿಡಬೇಕು. ಕೃಷಿ ಉಪಕರಣಗಳ ಮೇಲಿನ ಜಿಎಸ್‌ಟಿ ರದ್ದು ಮಾಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡುವಾಗ ಸಿಬಿಲ್ ಪರಿಗಣನೆ ಮಾಡಬಾರದು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.

ಮುಳುಗಡೆ ಸಂತ್ರಸ್ತರು ಹಾಗೂ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ನೀರಾವರಿ ಯೋಜನೆಗಳು ಜಾರಿಯಾಗಬೇಕು. ಕಾರ್ಮಿಕ ವಿರೋಧಿ ಕಾಯ್ದೆ ರದ್ದಾಗಬೇಕು. ಉದ್ಯೋಗ ಭದ್ರತೆ ಸಿಗಬೇಕು. ದುಡಿಮೆಯ ಅವಧಿಯನ್ನು 8 ಗಂಟೆಯಿಂದ 12-14 ಗಂಟೆಯವರೆಗೆ ಏರಿಸಿರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಕೆ.ರಾಘವೇಂದ್ರ, ಕೆ.ರುದ್ರೇಶ್, ಎನ್.ಡಿ. ನಾಗರಾಜ್, ಚಂದ್ರಪ್ಪ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net