ವಿಜಯಕುಮಾರ್‌ಗೆ ಪರಿಷತ್ ಟಿಕೆಟ್ ನೀಡಿ

RemasterDirector_1a5c03258
ಪಿರಿಯಾಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಬಿ.ಎನ್.ಕರಿಗೌಡ ಮಾತನಾಡಿದರು. ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಹೊಲದಪ್ಪ, ಮಹದೇವ್, ಬಿ.ಜೆ.ಬಸವರಾಜ್ ಮತ್ತಿತರರು ಇದ್ದರು.
Published on

ಪಿರಿಯಾಪಟ್ಟಣ : ವಿಧಾನ ಪರಿಷತ್‌ಗೆ ಜೂನ್ ತಿಂಗಳಿನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಡಾ.ಬಿ.ಜೆ.ವಿಜಯಕುಮಾರ್ ಅವರಿಗೆ ಟಿಕೆಟ್ ನೀಡಬೇಕು ಎಂದು ಮೃಗಾಲಯ ಪ್ರಾಧಿಕಾರದ ಮಾಜಿ ಸದಸ್ಯ ಬಿ.ಎನ್.ಕರಿಗೌಡ ಮನವಿ ಮಾಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಡಾ.ಬಿ.ಜೆ.ವಿಜಯಕುಮಾರ್ ಮೈಸೂರು ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಅವರ ಕ್ರಿಯಾಶೀಲ ಚಟುವಟಿಕೆಯಿಂದ ಇಡೀ ರಾಜ್ಯದಲ್ಲಿಯೇ ಅತ್ಯುತ್ತಮ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರಾಗಿ ನಂಬರ್ 1 ಸ್ಥಾನದಲ್ಲಿದ್ದಾರೆ ಎಂದರು.
ಅವರ ತಂದೆ ಜವರಪ್ಪ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು ಕಾಂಗ್ರೆಸ್ ಮುಖಂಡರು ಜವರಪ್ಪ ಸಹಕಾರದಿಂದಲೇ ಮುನ್ನೆಲೆಗೆ ಬಂದಿದ್ದಾರೆ. ಡಾ.ಬಿ.ಜೆ.ವಿಜಯಕುಮಾರ್ ಸಹೋದರ ಬಿ.ಜೆ.ಬಸವರಾಜ್ 20 ವರ್ಷಗಳಿಂದ ತಾಲೂಕು ಕಾಂಗ್ರೆಸ್ ಘಟಕದ ಖಜಾಂಚಿಯಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಲೋಕಸಭಾ ಚುನಾವಣೆಯಲ್ಲಿ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬಿ.ಜೆ.ವಿಜಯಕುಮಾರ್ ಅವರ ಹೆಸರು ಮುಂಚೂಣಿಯಲ್ಲಿ ಇತ್ತಾದರೂ ಹೈಕಮಾಂಡ್ ನಿರ್ದೇಶನ ಮತ್ತು ಸೂಚನೆಯಂತೆ ಎಂ.ಲಕ್ಷ್ಮಣ್ ಅಭ್ಯರ್ಥಿಯಾಗಿದ್ದಾರೆ. ಅವರ ಗೆಲುವಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿದಿದ್ದೇವೆ. ವಿಧಾನಪರಿಷತ್ ಚುನಾವಣೆಯ ಟಿಕೆಟ್ ನೀಡುವಂತೆ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ವೆಂಕಟೇಶ್, ಡಾ.ಎಚ್.ಸಿ.ಮಹದೇವಪ್ಪ ಅವರಿಗೆೆ ಮನವಿ ಸಲ್ಲಿಸಿದ್ದು ಅವರಿಂದ ಸಕಾರಾತ್ಮಕವಾದ ಭರವಸೆ ಬಂದಿದೆ ಎಂದು ತಿಳಿಸಿದರು.
ಪಿರಿಯಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ಮುಖಂಡರಾದ ಕಾನೂರು ಗೋವಿಂದೇಗೌಡ, ಅನಿಲ್ ಕುಮಾರ್, ಪಿ.ಮಹದೇವ್, ಹೊಲದಪ್ಪ ಮಾತನಾಡಿದರು.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಶೋಕ್‌ಕುಮಾರ್ ಗೌಡ, ಮುಖಂಡರಾದ ಬಿ.ಜೆ.ಬಸವರಾಜ್, ಆರ್.ಎಸ್.ಮಹದೇವ್, ಡಿ.ಎ.ಜವರಪ್ಪ, ರಾಜಶೇಖರ್, ಪಿ.ಪಿ.ಮಹದೇವ್, ಶೇಖರ್, ಪುಟ್ಟಯ್ಯ, ರಾಮಚಂದ್ರ, ಎಚ್.ಟಿ.ಪರಮೇಶ್, ನಾಗಣ್ಣ, ಎಚ್.ಕೆ.ಮಂಜುನಾಥ್, ಪಿ.ಎಸ್.ವಿಷಕಂಠಯ್ಯ, ಪುಟ್ಟರಾಜು, ಶಿವಣ್ಣ, ರಾಜಯ್ಯ, ಮಹದೇವ್, ದೇವರಾಜ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net