

ಬೆಂಗಳೂರು: ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಭದ್ರತೆಯ ದೃಷ್ಟಿಯಿಂದ ನಗರದ ವಸತಿ ಸೌಕರ್ಯವುಳ್ಳ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವ ಪ್ರವಾಸಿಗರ ಬಗ್ಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಕರ್ನಾಟಕ ಹೋಟೆಲ್ ಮಾಲೀಕರುಗಳ ಸಂಘದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಆ.೧೫ರಂದು ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕವಾಯತು ಮತ್ತು ಸಮಾರಂಭಗಳು ನಡೆಯಲಿವೆ. ಉಗ್ರಗಾಮಿಗಳು ಬೆಂಗಳೂರು ನಗರವನ್ನು ಗುರಿಯಾಗಿಸಿರುವುದರಿಂದ ಹೋಟೆಲ್‌ಗಳಲ್ಲಿ ತಂಗುವ ವಿದೇಶಿಯರು, ಸಂಶಯಾಸ್ಪದ ವ್ಯಕ್ತಿಗಳು ಹಾಗೂ ಅಪರಿಚಿತ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಬೇಕು. ಇಂತಹ ವ್ಯಕ್ತಿಗಳ ಬಗ್ಗೆ ನಿಗಾವಹಿಸಲು ತಮ್ಮ ಸಂಘದ ಸದಸ್ಯರಾಗಿರುವ ಹೋಟೆಲ್ ಮಾಲೀಕರು, ಹೋಟೆಲ್ ಮ್ಯಾನೇಜರ್‌ಗಳು ಹಾಗೂ ಇತರೆ ನೌಕರರ ತಿಳಿಸಬೇಕು. ಒಂದು ವೇಳೆ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ವಸತಿ ಗೃಹಗಳಲ್ಲಿ ತಂಗುವವರ ವಿವರಗಳು, ಫೋಟೋ, ಗುರುತಿನ ಚೀಟಿ ಸಮೇತ ದಾಖಲೆ ಪಡೆಯಬೇಕು. ಭದ್ರತಾ ಕಾರ್ಯದಲ್ಲಿ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುವಂತೆ ಪತ್ರದಲ್ಲಿ ಕೋರಿದ್ದಾರೆ.