ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ

17HDK03
Published on

ಎಚ್. ಡಿ.ಕೋಟೆ: ಉತ್ತಮ ರೀತಿಯಲ್ಲಿ ಬಾಯಿಯ ಆರೋಗ್ಯ ಕಾಪಾಡಿಕೊಂಡರೆ ದೈಹಿಕವಾಗಿಯೂ ಆರೋಗ್ಯವಂತರಾಗಿರಬಹುದು ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಬೃಂದಾ ತಿಳಿಸಿದರು.


ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಬುಧವಾರ ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಮೇಟಿಕುಪ್ಪೆ ಗ್ರಾಮದಲ್ಲಿ ದಂತ ತಪಾಸಣೆ ಮತ್ತು ಉಚಿತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿ, ದಿನನಿತ್ಯ ದೇಹವನ್ನು ಸ್ವಚ್ಛಗೊಳಿಸುವ ಹಾಗೆಯೇ ದಂತವನ್ನು ಸ್ವಚ್ಛಗೊಳಿಸಬೇಕು. ದಿನಕ್ಕೆರಡು ಬಾರಿ ಸ್ವಚ್ಛಗೊಳಿಸಬೇಕು ಎಂದು ತಿಳಿಸಿದರು.


ದಂತ ವೈದ್ಯ ಡಾ.ಸಮಿವುಲ್ಲಾ ಶರೀಫ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ದಂತ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದಡಿ ಲಭ್ಯವಿರುವ ಸವಲತ್ತು ಜನರಿಗೆ ತಿಳಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿದೆ. 45 ವರ್ಷ ಮೇಲ್ಪಟ್ಟು ಬಿಪಿಎಲ್ ಕಾರ್ಡ್ ಹೊಂದಿರುವವರು ಹಾಗೂ 3 ರಿಂದ 4 ಹಲ್ಲುಗಳನ್ನು ಕಳೆದುಕೊಂಡವರು ಈ ಯೋಜನೆಯ ಫಲಾನುಭವಿಗಳಾಗಿದ್ದು ಅಂತಹ ವ್ಯಕ್ತಿಗಳು ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚೀಟಿ ಪಡೆದು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಕೃತಕ ದಂತ ಪಂಕ್ತಿಯನ್ನು ಜೋಡಿಸಿಕೊಳ್ಳಬಹುದು ಎಂದು ತಿಳಿಸಿದರು.


ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಆರೋಗ್ಯ ಇಲಾಖೆ ಸಿಬ್ಬಂದಿ ಸರಳಾ, ರವಿರಾಜ್, ನಾಗೇಶ್, ಮಾನಸಾ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net