ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ

01.07tnp news
Published on

ತಿ.ನರಸೀಪುರ: ಗ್ರಾಮೀಣ ಪ್ರದೇಶದ ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕಿದೆ ಎಂದು ಮೈಸೂರು ಜಿಲ್ಲಾ ವಾಲ್ಮೀಕಿ ಒಕ್ಕೂಟದ ಅಧ್ಯಕ್ಷ ತಾಯೂರು ಪ್ರಕಾಶ್ ಹೇಳಿದರು.


ಪಟ್ಟಣದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಗುರುವಾರ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ವಿಜೇತರ ಆಯ್ಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿದ್ಯೆಯಿಂದ ಉತ್ತಮ ಸಂಸ್ಕಾರ ಕಲಿಯಲು, ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕಾರಿ ಎಂದರು.


ಮಹಿಳೆಯರು ಪುಸ್ತಕ, ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಜ್ಞಾನಾರ್ಜನೆ ಹೆಚ್ಚುತ್ತದೆ. ಹೆಣ್ಣು ಮಕ್ಕಳು ಶಾಲೆಯಲ್ಲಿ ವಿದ್ಯೆ ಕಲಿಯುವುದು ಎಷ್ಟು ಮುಖ್ಯವೋ, ಪತ್ರಿಕೆಗಳನ್ನು ಓದುವುದು ಅಷ್ಟೇ ಮುಖ್ಯವಾಗಿದೆ ಎಂದು ಸಲಹೆ ನೀಡಿದರು.


ಗ್ರಾಮೀಣ ಪ್ರದೇಶದ ಮಹಿಳೆಯರು ಸ್ಪರ್ಧೆಯಲ್ಲಿ ವಿಜೇತರಾಗಿರುವುದು ಸಂತೋಷದ ವಿಷಯ. ಪ್ರತಿನಿತ್ಯ ದಿನಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿನಿತ್ಯ ಒಂದು ಗಂಟೆ ಪತ್ರಿಕೆ ಓದುವ ಹವ್ಯಾಸವನ್ನು ಕಲಿತರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಇದರಿಂದ ನಿಮ್ಮ ಜ್ಞಾನಾರ್ಜನೆಯೂ ಹೆಚ್ಚುತ್ತದೆ ಎಂದು ತಿಳಿಸಿದರು.


ವಕೀಲರಾದ ಸುಚಿತ್ರ ಮಾತನಾಡಿ, ಹೆಣ್ಣು ಮಕ್ಕಳು ಪತ್ರಿಕೆಗಳಲ್ಲಿ ಬರುವ ಆರೋಗ್ಯ, ಯೋಗ, ಧ್ಯಾನ ಸಂಬಂಧಿತ ಸುದ್ದಿಗಳನ್ನು ಓದುವುದರಿಂದ ಉಪಯುಕ್ತ ಮಾಹಿತಿಗಳು ಸಿಗಲಿವೆ. ‘ವಿಜಯವಾಣಿ’ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆ ಮಹಿಳೆಯರಲ್ಲಿ ಓದುವ ಹವ್ಯಾಸ ಬೆಳೆಸುವ ದೃಷ್ಟಿಯಿಂದ ಉತ್ತಮವಾಗಿದೆ ಎಂದರು.


ವಿಜಯವಾಣಿ ಮೈಸೂರು ಬ್ಯೂರೋ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ ಪ್ರಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಜಗದೀಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ವಿದ್ಯಾರ್ಥಿಗಳು ಹಾಜರಿದ್ದರು.
ವಿಜೇತರು: ಪುಟ್ಟರಾಜಮ್ಮ ಟಿ ಬೆಟ್ಟಳ್ಳಿ, ಟಿ.ಜಿ.ಸುಮಿತ್ರಾ ಸಿದ್ದುಹುಂಡಿ, ಯಶೋದಾ ತಲಕಾಡು, ಶಾರದಾ ಮಾದಾಪುರ, ಕಲ್ಪನಾ ತಲಕಾಡು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net