

ಶಿವಮೊಗ್ಗ: ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಶಿಕ್ಷಣದ ಜತೆಗೆ ಕೌಶಲ ಅತ್ಯಂತ ಮುಖ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶನಿವಾರ ಅಡ್ವಾನ್ಸ್ಡ್ ಸ್ಕಿಲ್ ಡೆವಲಪ್‌ಮೆಂಟ್ ಅಕಾಡೆಮಿ ಮತ್ತು ವಿಸ್ಟಾ ತಂತ್ರಜ್ಞಾನ ಸಂಸ್ಥೆಯಿಂದ ಆಯೋಜಿಸಿದ್ದ ವೃತ್ತಿ ಕೌಶಲ ಮಾರ್ಗದರ್ಶನ ತರಬೇತಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಣಾ ಸಮಾರೋಪದಲ್ಲಿ ಮಾತನಾಡಿದರು.
ಸ್ಕಿಲ್ ಅಕಾಡೆಮಿ ಶಿವಮೊಗ್ಗದಲ್ಲಿ ಆರಂಭವಾಗಿರುವುದು ಹೆಮ್ಮೆಯ ವಿಚಾರ. ಯುವಜನರಿಗೆ ಅಗತ್ಯವಿರುವ ಕೌಶಲ ಕಲಿಸುವ ಮೂಲಕ ಉತ್ತಮ ಸಾಧನೆ ಮಾಡಲು ಪ್ರೇರೇಪಿಸಬೇಕು. ನಾವು ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಯಾವ ಕೌಶಲ ಅಗತ್ಯ ಎಂಬುದನ್ನು ಆರಂಭದಲ್ಲಿ ಮನಗಾಣಬೇಕು. ಇದರಿಂದ ವೃತ್ತಿ ಜೀವನದಲ್ಲಿ ಉನ್ನತ ಹಂತ ತಲುಪಲು ಸಾಧ್ಯವಾಗುತ್ತದೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಯುವಜನರು ಕೌಶಲ ಕಲಿಕೆಗೆ ಶಿಕ್ಷಣದ ಅವಧಿಯಲ್ಲೇ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಇದರಿಂದ ಉದ್ಯೋಗ ಕ್ಷೇತ್ರದಲ್ಲಿ ವೇಗವಾಗಿ ಪ್ರಗತಿ ಸಾಧಿಸಲು ಸಾಧ್ಯ. ಜಿಲ್ಲೆಯಲ್ಲಿ ಉದ್ಯಮ ಆರಂಭಿಸಲು ಪೂರಕ ವಾತಾವರಣವಿದೆ. ಯುವಜನತೆ ಉದ್ಯಮ ಆರಂಭಿಸಿ ಉದ್ಯೋಗ ಸೃಷ್ಟಿಸಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಶಂಕರನಾರಾಯಣ, ಡಾ. ರಜನಿ ಪೈ, ಎಸ್.ಎನ್.ನಾಗರಾಜ, ಪೂರ್ಣಿಮಾ, ವಿಸ್ಟಾ ಸಂಸ್ಥೆಯ ಎ.ಎಸ್.ವಿನಯಕುಮಾರ್, ಸಂಜಯಕುಮಾರ್ ಇದ್ದರು.