

ಶಿವಮೊಗ್ಗ: ಶರಾವತಿ ವಿದ್ಯುತ್ ಯೋಜನೆಗಾಗಿ ಲಿಂಗನಮಕ್ಕಿ ಕಟ್ಟುವಾಗ ಸ್ವಾಧೀನಕ್ಕೆ ಪಡೆದಿದ್ದ ಭೂಮಿಯ ಪೈಕಿ ಇನ್ನೂ ನೂರಾರು ಎಕರೆ ಮುಳುಗಡೆಯಾಗದೇ ಉಳಿದಿದೆ. ಇದನ್ನು ಅದರ ಮಾಲೀಕರಿಗೆ, ಸಾಗುವಳಿದಾರರಿಗೆ ಬಿಟ್ಟುಕೊಡಬೇಕೆಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಒತ್ತಾಯಿಸಿದರು.
ಡ್ಯಾಂ ನಿರ್ಮಿಸುವ ಮುನ್ನ ಸುಮಾರು ಒಂದು ಲಕ್ಷ ಎಕರೆ ಭೂಮಿಯನ್ನು ಕೆಪಿಸಿಗೆ ನೀಡಲಾಗಿತ್ತು. ಭೂಸ್ವಾಧೀನ ಕಾಯ್ದೆ ಪ್ರಕಾರ ನಿಗದಿತ ಉದ್ದೇಶಕ್ಕೆ 5 ವರ್ಷದೊಳಗೆ ಭೂಮಿ ಬಳಸಬೇಕು. ಬಳಕೆಯಾಗದಿದ್ದರೆ ಅದನ್ನು ಮಾಲೀಕರಿಗೆ ಮರಳಿಸಬೇಕು. ಹೀಗಾಗಿ ಕಾಯ್ದೆಯನ್ನು ಪಾಲಿಸಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸಾಗರ, ಹೊಸನಗರ, ನಗರದ ಸುಮಾರು 15 ಸಾವಿರ ಕುಟುಂಬಗಳು ಕೆಪಿಸಿ ಸ್ವಾಧೀನದಲ್ಲಿರುವ ಭೂಮಿಯಲ್ಲಿ ಬದುಕು ಕಟ್ಟಿಕೊಂಡಿವೆ. ಇಲ್ಲಿ ಸಾಗುವಳಿ ಮಾಡುತ್ತಿರುವ ಬಹುತೇಕ ಕುಟುಂಬಗಳಿಗೆ ಬೇರೆ ಎಲ್ಲಿಯೂ ಭೂಮಿಯಿಲ್ಲ. ಹೀಗಾಗಿ ಅವರಿಗೆ ಉಳಿದ ಭೂಮಿಯನ್ನು ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ಕಾಗೋಡು ತಿಮ್ಮಪ್ಪ ಸ್ಪೀಕರ್ ಆಗಿದ್ದ ಸಂದರ್ಭ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಇಂತಹ ಭೂಮಿಯಲ್ಲಿ ಎಷ್ಟು ಜನ ಸಾಗುವಳಿದಾರರಿದ್ದಾರೆ ಎಂಬುದನ್ನು ಸರ್ವೇ ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಈಗಲಾದರೂ ಅದು ಕಾರ್ಯಗತವಾಗಬೇಕು ಎಂದು ಒತ್ತಾಯಿಸಿದರು.
ರೈತರು ಹಕ್ಕುಪತ್ರ ಪಡೆದ ಭೂಮಿಯನ್ನು ಈಗ ಕಾನೂನು ಬಾಹಿರವಾಗಿ ಅರಣ್ಯ ಮಾಡಲು ಸರ್ಕಾರ ಮುಂದಾಗಿದೆ. ಇದು ಖಂಡನೀಯ. ಜನಪ್ರತಿನಿಧಿಗಳು ನ್ಯಾಯಾಲಯದಲ್ಲಿ ವಸ್ತುಸ್ಥಿತಿ ತಿಳಿಸದ ಕಾರಣ ಮಲೆನಾಡು ಮಸಣವಾಗುವ ಅಪಾಯವಿದೆ. ಭೂಮಿ ಮಾಲೀಕತ್ವ ಪಡೆಯುವುದು ನಮ್ಮ ಹಕ್ಕು. ಇದಕ್ಕೆ ಸಂಚಕಾರ ಬಂದರೆ ನಮ್ಮ ಜೀವ ತ್ಯಾಗ ಮಾಡಲು ಸಿದ್ಧ ಎಂದು ಹೇಳಿದರು.
ಪ್ರಮುಖರಾದ ಚಕ್ರಪಾಣಿ, ಅಶೋಕ, ಜಿನದತ್ತ ಜೈನ್, ಪ್ರಕಾಶ, ಅಜಿತ್‌ಕುಮಾರ್ ಜೈನ್, ಎಂ.ಎಂ.ಕೃಷ್ಣಮೂರ್ತಿ, ತಿಮ್ಮಪ್ಪ ಇತರರಿದ್ದರು.