

ಹುಣಸೂರು: ಕರ್ತವ್ಯದ ವೇಳೆ ಮೃತಪಟ್ಟ ಹುಣಸೂರು ನಗರಸಭೆಯ 6 ಪೌರಕಾರ್ಮಿಕರ ಕುಟುಂಬಕ್ಕೆ ಪರಿಹಾರ ಮತ್ತು ಕುಟುಂಬಸ್ಥರಿಗೆ ಉದ್ಯೋಗ ನೀಡಬೇಕೆಂದು ಸತ್ಯ ಎಂಎಎಸ್ ಫೌಂಡೇಷನ್ ನೇತೃತ್ವದಲ್ಲಿ ಪೌರಕಾರ್ಮಿಕರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಶನಿವಾರ ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಯದುಗಿರೀಶ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ, ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ನೇರ ಪಾವತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಂಗಸ್ವಾಮಿ, ಪಳನಿಸ್ವಾಮಿ, ಮುತ್ತಯ್ಯ, ಮುರುಗೇಶ, ಮುರಳಿ ಮತ್ತು ವೀರ ನಿಧನರಾಗಿದ್ದಾರೆ. ಆದರೆ ಅವರೆಲ್ಲರೂ ಮೃತಪಟ್ಟು ವರ್ಷಗಳೇ ಉರುಳಿದರೂ ಸರ್ಕಾರವಾಗಲಿ ಅಥವಾ ನಗರಸಭೆಯಾಗಲಿ ಯಾವುದೇ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕಲ್ಪಿಸುವ ಗೋಜಿಗೆ ಹೋಗಿಲ್ಲ. ಈ ಕುರಿತು ವರ್ಷದ ಹಿಂದೆ ಫೌಂಡೇಷನ್ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿತ್ತು. ಇಷ್ಟಾಗಿಯೂ ನೊಂದ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಈಗಲಾದರೂ ಸರ್ಕಾರ ಈ ಬಡ ಪೌರಕಾರ್ಮಿಕ ಕುಟುಂಬಗಳ ಪರವಾಗಿ ನಿಂತು ಆರ್ಥಿಕ ಸಹಾಯ ಮತ್ತು ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ಪೌರಕಾರ್ಮಿಕರಾದ ಮೃತ ಪೌರಕಾರ್ಮಿಕರ ಪತ್ನಿಯರಾದ ಶೋಭಾ, ಲಕ್ಷ್ಮೀ, ಜ್ಯೋತಿ, ಮುಖಂಡರಾದ ಧರ್ಮ, ಅಜಯ್, ಅಭಿ, ಪ್ರಕಾಶ್‌ರಾವ್ ಜಾಧವ್ ಇತರರು ಇದ್ದರು.