ಆರೋಗ್ಯಕರ ಮಗುವಿಗೆ ಜನ್ಮ ನೀಡಿ..ಹಣ ಪಡೆಯಿರಿ! ಯುವತಿಯರಿಗೆ ಬಂಪರ್‌ ಆಫರ್ ನೀಡಿದ ಸರ್ಕಾರ

baby
Published on

ರಷ್ಯಾ: ರಷ್ಯಾದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದಾಗಿ ದೇಶದ ವಾಯುವ್ಯದಲ್ಲಿರುವ ಕರೇಲಿಯಾದಲ್ಲಿರುವ ರಷ್ಯಾದ ಅಧಿಕಾರಿಗಳು ಸರ್ಕಾರ ಹೊಸ ಹೊಸ ಯೋಜನೆಗಳನ್ನು ತಂದಿದ್ದಾರೆ. ಸಂತಾನೋತ್ಪತ್ತಿಯನ್ನು ಹೆಚ್ಚಿಸಲು ಯುವತಿಯರಿಗೆ ಬಂಪರ್‌ ಆಫರ್‌ ಒಂದನ್ನು ಅಧಿಕಾರಿಗಳು ನೀಡಿದ್ದಾರೆ. ಹೆರಿಗೆ ಪ್ರೋತ್ಸಾಹ ನೀತಿಯನ್ನು ಘೋಷಿಸಿದ್ದಾರೆ.

ದೇಶದಲ್ಲಿ ಇದಾಗಲೇ ಕಾಂಡೋಮ್‌, ಮಾತ್ರೆಗಳು ಇತ್ಯಾದಿ ಗರ್ಭ ನಿರೋಧಕಗಳನ್ನು ಸರ್ಕಾರ ನಿಷೇಧಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ 8 ಮಕ್ಕಳಿಗೆ ಜನ್ಮ ನೀಡುವಂತೆ ರಷ್ಯಾ ಅಧ್ಯಕ್ಷ ಪುಟಿನ್‌ ದೇಶದ ಪ್ರತಿಯೊಬ್ಬ ಮಹಿಳೆಯರಿಗೆ ಮನವಿ ಮಾಡಿದ್ದರು.

ಈ ಹಿಂದೆ 10 ಮಕ್ಕಳನ್ನು ಹೆರುವವರಿಗೆ 13 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು. ಇದೀಗ ಸಂತಾನೋತ್ಪತ್ತಿ ದರವನ್ನು ಹೆಚ್ಚಿಸಲು ಅಂತಹದೇ ಹೊಸ ಆಫರ್‌ ಒಂದನ್ನು 25 ವರ್ಷದೊಳಗಿನ ಕಾಲೇಜು ಯುವತಿಯರಿಗೆ ನೀಡಲಾಗಿದ್ದು, ಯುವತಿಯರು ಆರೋಗ್ಯವಂತ ಮಕ್ಕಳನ್ನು ಹೆತ್ತರೆ ಭರ್ಜರಿ ಹಣವನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ. ಈ ಕುರಿತ ಸುದ್ದಿಯೊಂದು ಸಖತ್‌ ವೈರಲ್‌ ಆಗುತ್ತಿದೆ.

ರಷ್ಯಾದ ವಾಯವ್ಯ ಪ್ರದೇಶವಾದ ರಿಪಬ್ಲಿಕ್‌ ಆಫ್‌ ಕರೇಲಿಯಾದಲ್ಲಿ ಇಲ್ಲಿನ ಸ್ಥಳೀಯ ಅಧಿಕಾರಿಗಳು ಸಂತಾನೋತ್ಪತ್ತಿ ದರವನ್ನು ಹೆಚ್ಚಿಸಲು ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಸ್ಥಳೀಯ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಓದುತ್ತಿರುವ 25 ವರ್ಷದೊಳಗಿನ ಯುವತಿಯರು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದರೆ ಅವರಿಗೆ ರೂ. 92 ಸಾವಿರ ಬಹುಮಾನ ನೀಡಲಾಗುವುದು ಎಂದು ಬಂಪರ್‌ ಆಫರ್‌ ಒಂದನ್ನು ಘೋಷಿಸಿದೆ. ಈ ಯೋಜನೆ ಮುಂದಿನ ವರ್ಷ ಜನವರಿ 01 ರಿಂದ ಜಾರಿಗೆ ಬರಲಿದೆ.

ಸತ್ತ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಬೋನಸ್ ಲಭ್ಯವಿಲ್ಲ ಎಂದು ಕಾನೂನು ಸ್ಪಷ್ಟಪಡಿಸುತ್ತದೆ. ಅಲ್ಲದೆ, ಅಂಗವೈಕಲ್ಯ ಹೊಂದಿರುವ ಮಗುವಿಗೆ ಜನ್ಮ ನೀಡುವ ಮಹಿಳೆಯರು ಪಾವತಿಗೆ ಅರ್ಹರಾಗುತ್ತಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net