

ರಾಣೆಬೆನ್ನೂರ: ತಾಲೂಕಿನಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ಮತ್ತು ಬೆಳೆ ವಿಮೆ ನೀಡುವಂತೆ ಆಗ್ರಹಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ಸುರಿದ ಮಳೆಗೆ ರೈತರು ಬೆಳೆದ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಇದರಿಂದ ರೈತರು ತುಂಬಾ ಸಂಕಷ್ಟದಲ್ಲಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ನಿಮಾರ್ಣವಾಗಿದೆ. ಕೂಡಲೇ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು.
ದಯಮಾಡಿ ಸರ್ಕಾರ ತಮ್ಮ ಅವಧಿಯಲ್ಲಿ ಸಾಕಷ್ಟು ನೋವುಗಳನ್ನು ಕಂಡಿದ್ದು, ಅದನ್ನು ನಿವಾರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕೂಡಲೇ ಎಚ್ಚೆತ್ತುಕೊಂಡು ಸರಿಪಡಿಸುವಂತಹ ವ್ಯವಸ್ಥೆ ಕೈಗೊಳ್ಳಬೇಕು. ಕೆರೆಗಳ ಒತ್ತುವರಿಗಳನ್ನು ತೆರವುಗೊಳಿಸಿ ಹೂಳೆತ್ತಿಸಿ ಕೆರೆ ತುಂಬಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು.
ನೀರಿನ ಸಂಗ್ರಹಣೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ನಂತರ ನದಿಗಳಿಗೆ ಆಣೆಕಟ್ಟುಗಳನ್ನು ಕಟ್ಟಿ ನೀರನ್ನು ಸಂಗ್ರಹಣೆ ಮಾಡಿದರೆ ಅಲ್ಲಿರುವ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗುತ್ತದೆ. ಇವುಗಳನ್ನು ಮಾಡದೇ ಹೋದಲ್ಲಿ ಪ್ರತಿವರ್ಷವೂ ರೈತರು ಹಾಗೂ ಕೂಲಿ ಕಾಮಿರ್ಕರು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಸದ್ಯ ತಾಲೂಕಿನಲ್ಲಿ ಮಳೆಯಿಂದ ಹಾನಿಯಾಗಿರುವ ಮನೆಗಳಿಗೆ ಕನಿಷ್ಠ 5 ಲಕ್ಷ ರೂ. ಪರಿಹಾರ ನೀಡಬೇಕು. 1 ಹೆಕ್ಟೇರ್ ಬೆಳೆಗೆ ಆಯಾ ಬೆಳೆಗೆ ಸಂಬಂಧಪಟ್ಟಂತೆ ಸೂಕ್ತ ಪರಿಹಾರ ಕೊಡಬೇಕು. ನದಿ ಪಾತ್ರದ ಗ್ರಾಮಗಳ ಜನರಿಗೆ ಸುರಕ್ಷಿತ ಪ್ರದೇಶಗಳಲ್ಲಿ ವಸತಿ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಹನುಮಂತಪ್ಪ ಕಬ್ಬಾರ, ಚಂ.ಶು. ಪಾಟೀಲ, ಪ್ರಭುಸ್ವಾಮಿ ಕರ್ಜಗಿಮಠ, ಬಾಬಣ್ಣ ಕೊಪ್ಪದ, ಮಹದೇವಪ್ಪ ಬಣಕಾರ, ಸಂತೋಷ ಅಣಜಿ, ಫಿರ್ಸಾಬ್ ಪಿಂಜಾರ, ನಾಗರಾಜ ಶೆಟ್ಟರ, ಮಹಮದ್ಅಲಿ ಸೈಕಲ್ಗಾರ, ಬಸವರಾಜ ಶಾಂತನವರ, ಸುರೇಶ ಪಾಳೇದ, ಗದಿಗೆಪ್ಪ, ಮಂಜಪ್ಪ ಕರೇಕಟ್ಟಿ, ಜಿ.ಎಸ್.ಕರೇಕಟ್ಟಿ, ನಾಗರಾಜ, ಕೆ.ವಿ.ಕೋರಿಶೆಟ್ಟಿ, ಚನ್ನಬಸಪ್ಪ ಮತ್ತಿತರರಿದ್ದರು.