ಅರಣ್ಯ ಒತ್ತುವರಿ ಭೂಮಿ ವಾಪಸ್‌ಗೆ ಅವಕಾಶ ನೀಡಿ; ಕಾಂಗ್ರೆಸ್ ನಾಯಕರಿಂದ ಮನವಿ

DDDD
Published on

ಬೆಂಗಳೂರು: ದಂಡ/ಶಿಕ್ಷೆ ರಹಿತವಾಗಿ ಅರಣ್ಯ ಒತ್ತುವರಿ ಭೂಮಿಯನ್ನು ಹಿಂದಿರುಗುಸಲು ಒಂದು ಬಾರಿ ಅವಕಾಶ ನೀಡುವಂತೆ ಕಾಂಗ್ರೆಸ್ ನಾಯಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಹುಲಿಗಳ ಉರುಗು, ಆನೆ ಬಾಲದ ಕೂದಲು, ಜಿಂಕೆ, ಸಾರಂಗ, ಕಡವೆ, ಕಾಡುಕೋಣದ ಕೊಂಬುಗಳು ಸೇರಿದಂತೆ ವಿವಿಧ ವನ್ಯಜೀವಿಗಳ ಅಂಗಾಂಗದಿಂದ ತಯಾರಿಸಿದ ಟ್ರೋಫಿ ಇತ್ಯಾದಿಗಳನ್ನು ದಂಡ ಅಥವಾ ಶಿಕ್ಷೆ ರಹಿತವಾಗಿ ಸರ್ಕಾರಕ್ಕೆ ಹಿಂದಿರುಗಿಸಲು ಅವಕಾಶ ನೀಡಿರುವ ಮಾದರಿಯಲ್ಲೇ ಒತ್ತುವರಿ ಅರಣ್ಯ ಭೂಮಿ ವಾಪಸ್‌ಗೂ ಅವಕಾಶ ಕಲ್ಪಿಸಬೇಕು ಎಂದು ಕೆಪಿಸಿಸಿ ಕೋ-ಆರ್ಡಿನೇಟರ್ ವಿ.ಕೆ.ದೀಪಕ್ ಹಾಗೂ ಕೆಪಿಸಿಸಿ ಲೀಗಲ್ ಸೆಲ್‌ನ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ 2 ಲಕ್ಷ ಎಕರೆಗೂ ಅಧಿಕ ಅರಣ್ಯ ಭೂಮಿ ಒತ್ತುವರಿಯಾಗಿದೆ. ಜಾಗತಿಕ ತಾಪಮಾನ ಏರಿಕೆ, ಹವಾಮಾನ ವೈಪರಿತ್ಯ ಮತ್ತು ಅರಣ್ಯ ಭೂಮಿ ಕ್ಷೀಣಿಸುತ್ತಿರುವುದರಿಂದ ಮಾನವ ಪ್ರಾಣಿ ಸಂಘರ್ಷಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸುವುದು ಅತ್ಯಂತ ಅಗತ್ಯ ಹಾಗೂ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು, ಕೋಲಾರ, ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆ ಈಗಾಗಲೇ ಒತ್ತುವರಿ ತೆರೆವಿಗೆ ಕಠಿಣ ಕ್ರಮ ಕೈಗೊಂಡಿರುವುದು ಶ್ಲಾಘನೀಯ.

ರಾಜ್ಯದ ಭವಿಷ್ಯದ ದೃಷ್ಟಿಯಿಂದ ಹಸಿರುವ ಹೊದಿಕೆ ಕಾಪಾಡುವುದು ತಮ್ಮ ಮೇಲಿರುವ ಗುರುತರ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಅರಣ್ಯ ಭೂಮಿ ಒತ್ತುವರಿದಾರರು ಸ್ವಯಂ ಪ್ರೇರಿತರಾಗಿ ಸರ್ಕಾರಕ್ಕೆ ಹಿಂದಿರುಗಿಸಿದರೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ, ದಂಡ ವಿಧಿಸುವುದಿಲ್ಲ ಎಂದು ಒಂದು ಬಾರಿ ಅವಕಾಶ ನೀಡಿದರೆ ಲಕ್ಷಾಂತರ ಎಕರೆ ಭೂಮಿ ಮರಳಿ ಅರಣ್ಯ ಇಲಾಖೆ ಸುಪರ್ದಿಗೆ ಬರುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net