

ಬೆಂಗಳೂರು: ಮೈಸೂರು ಪ್ರಾಂತ್ಯದ ಲಿಂಗಾಯತಗೌಡರನ್ನು ಪಂಚಮಸಾಲಿಗಳೊಂದಿಗೆ 2ಎಗೆ ಸೇರ್ಪಡೆ ಮಾಡಬೇಕು ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಗೌಡ ಮಹಾಸಭಾ ಒತ್ತಾಯಿಸಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಕರೆದಿದ್ದ ವಿಚಾರಣೆಯಲ್ಲಿ ಭಾಗಿಯಾದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮೈಸೂರು ಹೊಸಮಠದ ಚಿದಾನಂದ ಸ್ವಾಮೀಜಿ, ಲಿಂಗಾಯತ ಗೌಡ ಮಹಾಸಭಾದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ ಅಲನಹಳ್ಳಿ, ಪಂಚಮಸಾಲಿ ಗೌಡ ಲಿಂಗಾಯತ ರಾಜ್ಯ ಸಂಚಾಲಕ ಅಮ್ಮನಪುರ ಮಲ್ಲೇಶ ಅವರನ್ನೊಳಗೊಂಡ ನಿಯೋಗದ ಪರವಾಗಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಗೌಡ ಮಹಾಸಭಾ ಕಾನೂನು ಘಟಕದ ರಾಷ್ಟ್ರೀಯ ಅಧ್ಯಕ್ಷ ದಿನೇಶ ಪಾಟೀಲ್ ವಾದ ಮಂಡಿಸಿದರು.
2ಎ ಮೀಸಲಾತಿಗೆ ಪುಸ್ತಕಗಳ ಆಧಾರ: ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಪಂಚಮಸಾಲಿ, ಮಲೆನಾಡಿನಲ್ಲಿ ಮಲೆಗೌಡ ಹಾಗೂ ಮೈಸೂರು ಪ್ರಾಂತ್ಯದ 14 ಜಿಲ್ಲೆಗಳಲ್ಲಿ ಲಿಂಗಾಯತ ಗೌಡ ಎಂದು ಸಮಾಜವನ್ನು ಕರೆಯಲಾಗುತ್ತದೆ. ಇವುಗಳನ್ನು ಲಿಂಗಾಯತ ಪಂಚಮಸಾಲಿಗಳ ಪರ್ಯಾಯ ನಾಮಗಳೆಂದು ಗುರುತಿಸಿ 2ಎ ಮೀಸಲಾತಿ ನೀಡಲು, ಮೈಸೂರು ಗೆಜೆಟ್, ಪಂಚಮಸಾಲಿ ದಾಖಲೆಗಳು ಹಾಗೂ ಸಂಶೋಧಕ ಎಂ.ಎಂ. ಕಲಬುರ್ಗಿ ಪುಸ್ತಕಗಳ ಆಧಾರವಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಲಿಂಗಾಯತ ಗೌಡ ಸಮಾಜಕ್ಕೆ ಮೀಸಲಾತಿ ವಿಚಾರಣೆಯ ನಡೆದಿರುವುದು ಸಂತಸವಾಗಿದೆ ಎಂದು ಆಯೋಗಕ್ಕೆ ದಿನೇಶ್ ಪಾಟೀಲ್ ತಿಳಿಸಿದರು.
ನಮ್ಮೊಂದಿಗೆ ಅವರಿಗೂ ನ್ಯಾಯ ಬೇಕು: ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಈಗಾಗಲೆ ಲಿಂಗಾಯತ ಪಂಚಮಸಾಲಿಗಳು 3ಬಿ ಹಿಂದುಳಿದ ವರ್ಗದಲ್ಲಿ ಇದ್ದಾರೆ. 2ಎ ಮೀಸಲಾತಿಗಾಗಿ ಹಳೇ ಮೈಸೂರು ಭಾಗದಲ್ಲಿ 14 ಜಿಲ್ಲೆಗಳಲ್ಲಿ ಆಗಸ್ಟ್ 26 ರಿಂದ ಪ್ರತಿಜ್ಞಾ ಪಂಚಾಯತ್ ಅಭಿಯಾನ ನಡೆಸಲಾಗಿದೆ. ಲಿಂಗಾಯತ ಗೌಡರ ಹಾಗೂ ಪಂಚಮಸಾಲಿಗಳ ಜೀವನ, ಧಾರ್ವಿುಕ ಹಾಗೂ ಕೃಷಿ ಪದ್ದತಿಗಳು ಒಂದೇ ತೆರನಾಗಿ ಇರುವುದರಿಂದ, ಪರ್ಯಾಯ ನಾಮಗಳ ಆಧಾರದ ಮೇಲೆ ನಮ್ಮೊಂದಿಗೆ ಅವರಿಗೂ ನ್ಯಾಯ ಒದಗಿಸಬೇಕು ಎಂದರು.
ಸರ್ವೆ ನಡೆಸಿ ಮಾಹಿತಿ ಸಂಗ್ರಹ: ನಿಯೋಗದ ವಾದವನ್ನು ಆಲಿಸಿದ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ, ಚಾಮರಾಜನಗರ, ಮೈಸೂರು ಹಾಗೂ ಕೆಲವು ಜಿಲ್ಲೆಗಳಲ್ಲಿ ಸರ್ವೆ ನಡೆಸಿ ಅಗತ್ಯ ಮಾಹಿತಿ ಸಂಗ್ರಹಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಯಾರ್ಯಾರಿದ್ದರು?: ನಿಯೋಗದಲ್ಲಿ ಮಾಜಿ ಮೇಯರ್ ಪುಟ್ಟರಾಜ್, ರಾಜ್ಯ ಮುಖಂಡ ನಟರಾಜ, ಕಾರ್ಯದರ್ಶಿ ಮಹೇಶ್, ಪ್ರಧಾನ ಕಾರ್ಯದರ್ಶಿ ಜಗದೀಶ್, ಚಾಮರಾಜನಗರದ ಶಂಭು ಪಾಟೇಲ್, ಪಂಚಸೇನಾ ರಾಜ್ಯ ಅಧ್ಯಕ್ಷ ಡಾ. ಬಿ. ಎಸ್. ಪಾಟೀಲ್ ನಾಗಾರಾಲ್ ಹುಲಿ, ಕೊಡಗು ಜಿಲ್ಲಾ ಅಧ್ಯಕ್ಷ ಮೋಹನ್, ಮೈಸೂರು ಜಿಲ್ಲಾ ಅಧ್ಯಕ್ಷ ಕೋಣ್ಣನೂರ್ ಜಗದೀಶ್, ಬೆಂಗಳೂರು ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಮೇಟಿ, ನಗರ ಅಧ್ಯಕ್ಷ ಮಲ್ಲೇವಾಡಿ ಶಿವಪುತ್ರ, ಮಕ್ಕಳ ಮನೆ ಸೋಮಶೇಖರ್ ಮತ್ತಿತರರು ಇದ್ದರು.