ಶಾಲಾ ಸಮವಸ್ತ್ರದಲ್ಲೇ ಸರ್ಕಾರಿ ವೈನ್​ ಶಾಪ್​ನಲ್ಲಿ ಮದ್ಯ ಖರೀದಿಸಿದ ವಿದ್ಯಾರ್ಥಿನಿಯರು; ವಿಡಿಯೋ ವೈರಲ್| Girls bought liquor

ವಿಜಯವಾಣಿ - 2025-10-25T195752.584
Published on

ಭೋಪಾಲ್: ಮಧ್ಯ ಪ್ರದೇಶದ ಮಾಂಡ್ಲಾ ಜಿಲ್ಲೆಯ ನೈನ್​ಪುರದಲ್ಲಿ ಸರ್ಕಾರಿ ಸ್ವಾಮ್ಯದ ವೈನ್​ ಶಾಪ್​ವೊಂದರಲ್ಲಿ ಶಾಲಾ ಸಮವಸ್ತ್ರದಲ್ಲಿಯೇ ವಿದ್ಯಾರ್ಥಿನಿಯರು ಮದ್ಯ ಖರೀದಿಸಿದ್ದು(Girls bought liquor), ಶನಿವಾರ(ಅ. 25) ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರೆಲ್ ಆಗಿದ್ದು, ಸಾರ್ವಜನಿಕವಾಗಿ ಆಕ್ರೋಶವನ್ನು ಹುಟ್ಟು ಹಾಕಿದೆ. ಅಧಿಕಾರಿಗಳನ್ನು ಮುಜುಗರಕ್ಕೀಡು ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಸಮವಸ್ತ್ರ ಧರಿಸಿದ ಇಬ್ಬರು ಶಾಲಾ ಬಾಲಕಿಯರು, ತಲೆಗೆ ಸ್ಕಾರ್ಫ್ ಕಟ್ಟಿಕೊಂಡು ಮದ್ಯದ ಅಂಗಡಿಯೊಳಗೆ ಹೋಗಿ ಕೌಂಟರ್​​ನಿಂದ ಮದ್ಯ ಖರೀದಿಸಿ ಹೊರಟು ಹೋಗುವುದು ದಾಖಲಾಗಿದೆ.

ಇನ್ನೂ ವಿಡಿಯೋ ವೈರಲ್ ಆಗುತ್ತಿದ್ದಂತೆ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್(SDM) ಅಶುತೋಷ್ ಠಾಕೂರ್, ತಹಶೀಲ್ದಾರ್ ಮತ್ತು ಸ್ಥಳೀಯ ಪೊಲೀಸರೊಂದಿಗೆ ವೈನ್​ಶಾಪ್​ಗೆ ಆಗಮಿಸಿ, ಅಂಗಡಿಯಲ್ಲಿ ವಿದ್ಯಾರ್ಥಿನಿಯರ ಮದ್ಯ ಖರೀದಿ ಬಗ್ಗೆ ದೃಶ್ಯಾವಳಿ  ಪರಿಶೀಲಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡಿದ್ದು ಖಚಿತವಾಗಿದ್ದು, ಅಪ್ರಾಪ್ತ ಮಕ್ಕಳಿಗೆ ಮದ್ಯ ಮಾರಾಟ ಮಾಡಿದ ಹಿನ್ನೆಲೆ ಇದು ಸಾಮಾನ್ಯ ಪರವಾನಗಿ ಷರತ್ತು ಮದ್ಯ ಕಾನೂನುಗಳ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದ್ದು, ಈ ಬಗ್ಗೆ ವಿವರವಾದ ತನಿಖೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ಅಬಕಾರಿ ಇಲಾಖೆಗೆ ಎಸ್​ಡಿಎಂ ಸೂಚನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಜಿಲ್ಲಾ ಅಬಕಾರಿ ಅಧಿಕಾರಿ ರಾಮ್ ಜಿ ಪಾಂಡೆ, ಘಟನೆ ಬಗ್ಗೆ ಅಂಗಡಿ ಮಾಲೀಕನ ವಿಚಾರಣೆ ನಡೆಸಲಾಗುತ್ತಿದೆ. ಹುಡುಗಿಯರು ತಮಗಾಗಿಯೇ ಖರೀದಿಸಿದ್ದಾರೆಯೇ ಅಥವಾ ಬೇರೆ ಯಾರಾದರೂ ಕಳುಹಿಸಿದ್ದಾರೆಯೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ತಮಗಾಗಿಯೇ ಖರೀದಿಸಿದ್ದಾರೆ ಎಂದು ಕಂಡು ಬಂದ್ರೆ, ಜಿಲ್ಲಾಧಿಕಾರಿಗೆ ವರದಿಯನ್ನು ಕಳುಹಿಸಲಾಗುವುದು. ಮದ್ಯದಂಗಡಿಯ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಹಾಗೂ ದಂಡ ವಿಧಿಸಲಾಗುವುದು. ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡಿದ ಉದ್ಯೋಗಿಯನ್ನು ವಜಾಗೊಳಿಸಲಾಗುವುದು. ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡುವುದು ಪರವಾನಗಿ ಷರತ್ತುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net