

ಪಾಟ್ನಾ: ಬಿಹಾರದಲ್ಲಿ ಚುನಾವಣೆ ಕಣ ರಂಗೇರಿದ್ದು, ಪಕ್ಷಗಳು ಪರಸ್ಪರ ದಾಳಿಯಲ್ಲಿ ತೊಡಗಿದ್ದು, ಇಂದು(ಅ. 25) ಖಗಾರಿಯಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah), ರಾಹುಲ್ ಗಾಂಧಿಯವರ ಘುಸ್ಪೇಟಿಯಾ ಯಾತ್ರೆಯಿಂದ ಒಳನುಸುಳುಕೋರರನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ವೋಟರ್ ಅಧಿಕಾರ ಯಾತ್ರೆ ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ.
20 ವರ್ಷಗಳ ಎನ್ಡಿಎ ಆಳ್ವಿಕೆಯಲ್ಲಿ ಬಿಹಾರದಲ್ಲಿ ಗಂಭೀರ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಮಗ ಬಿಹಾರದಲ್ಲಿ ಲೂಟಿ, ಕೊಲೆ ಮತ್ತು ಅಪರಾಧದ ಬಗ್ಗೆ ಮಾತನಾಡುತ್ತಿರುವುದನ್ನು ನಾನು ಕೇಳುತ್ತಿದ್ದೆ. ಇದು 'ಸೌ ಚುಹೆ ಖಾ ಕರ್, ಬಿಲ್ಲಿ ಹಜ್ ಕೋ ಚಲಿ' ಎಂದು ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಚುನಾವಣೆ ಕೇವಲ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚುನಾವಣೆಯಲ್ಲ. ಕಳೆದ 20 ವರ್ಷಗಳ ನಿತೀಶ್ ಕುಮಾರ್ ಅವರ ಅಧಿಕಾರಾವಧಿಯಲ್ಲಿ, 2005 ಕ್ಕೆ ಹೋಲಿಸಿದರೆ ಕೊಲೆ ಪ್ರಕರಣಗಳಲ್ಲಿ ಶೇಕಡಾ 20 ರಷ್ಟು ಇಳಿಕೆಯಾಗಿದೆ. ಈ ಚುನಾವಣೆ ಯಾರನ್ನಾದರೂ ಶಾಸಕ, ಮಂತ್ರಿ ಅಥವಾ ಮುಖ್ಯಮಂತ್ರಿಯನ್ನಾಗಿ ಮಾಡಲು ಮಾತ್ರವಲ್ಲ. ರಾಜ್ಯದಲ್ಲಿ 'ಜಂಗಲ್ ರಾಜ್' ಅಥವಾ 'ವಿಕಾಸ್ ರಾಜ್' ತರಬೇಕೆ ಎಂದು ನಿರ್ಧರಿಸಲು ಈ ಚುನಾವಣೆ ನಡೆಯುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.
ಭ್ರಷ್ಟಾಚಾರದ ದಾಖಲೆ ಹೊಂದಿರುವ ಮಹಾಘಟಬಂಧನ್, ಲಠಬಂಧನ್, ಬಿಹಾರವನ್ನು ಅಭಿವೃದ್ಧಿಪಡಿಸಬಹುದೇ? ಒಂದು ಪೈಸೆಯ ಭ್ರಷ್ಟಾಚಾರದ ಆರೋಪವಿಲ್ಲದ ನರೇಂದ್ರ ಮೋದಿ ಮತ್ತು ನಿತೀಶ್ ಬಾಬು ಮಾತ್ರ ಬಿಹಾರವನ್ನು ಅಭಿವೃದ್ಧಿಪಡಿಸಲು ಸಾಧ್ಯ ಎಂದು ಹೇಳಿದ್ದಾರೆ.
ಅಮಿತ್ ಶಾ ಹೇಳಿಕೆಗೆ ತೇಜಸ್ವಿ ಯಾದವ್ ತಿರುಗೇಟು
ಅಮಿತ್ ಶಾ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಆರ್ಜೆಡಿ ನಾಯಕ ಮತ್ತು ಇಂಡಿಯಾ ಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್, ಇಬಿಸಿ ಸಮುದಾಯದ ಬಗೆಗಿನ ಬಿಜೆಪಿ ದ್ವೇಷ ಬಹಿರಂಗವಾಗಿದೆ. ಇಂಡಿಯಾ ಮೈತ್ರಿಕೂಟ ವಿಐಪಿ ಪಕ್ಷದ ಮುಖೇಶ್ ಸಹಾನಿಯವರನ್ನು ಡಿಸಿಎಂ ಅಭ್ಯರ್ಥಿ ಮಾಡಿದ್ದನ್ನು ಪದೇ ಪದೇ ಪ್ರಶ್ನಿಸುತ್ತಿದೆ. ಬಿಜೆಪಿಗೆ ಭಯ ಶುರುವಾಗಿದೆ, ಅಮಿತ್ ಶಾ ಯಾಕೆ ಹತಾಶೆಗೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಧಾರ್ಮಿಕ ಅಲ್ಪಸಂಖ್ಯಾತರನ್ನು ಒಳನುಸುಳುವವರು ಎಂದು ಬಣ್ಣಿಸುವ ಶಾ ಸೇರಿದಂತೆ ಬಿಜೆಪಿ ನಾಯಕರು, ಈಗ ಇಂಡಿಯಾ ಬಣವು ಮುಸ್ಲಿಂ ನಾಯಕನನ್ನು ಡಿಸಿಎಂ ಅಭ್ಯರ್ಥಿಯಾಗಿ ಯಾಕೆ ಘೋಷಣೆ ಮಾಡಲಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ನಿಂದಿಸುವವರಿಗೆ ಈಗ ಅವರ ಪ್ರಾತಿನಿಧ್ಯದ ಚಿಂತೆಯಾಗಿದೆ. ಶೀಘ್ರದಲ್ಲೇ ಅದನ್ನು ಪರಿಹರಿಸುತ್ತೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)