ಹಬ್ಬಗಳಿಗಾಗಿ 12000 ಸಾವಿರ ವಿಶೇಷ ರೈಲು ವ್ಯವಸ್ಥೆ; ಜನದಟ್ಟಣೆ ವಿಡಿಯೋ ಪೋಸ್ಟ್ ಮಾಡಿ ರಾಹುಲ್ ಗಾಂಧಿ ವಾಗ್ದಾಳಿ| Rahul Gandhi

ವಿಜಯವಾಣಿ - 2025-10-25T164307.466
Published on

ನವದೆಹಲಿ: ಛತ್ ಹಬ್ಬ, ದೀಪಾವಳಿ ಹಾಗೂ ಬಿಹಾರ ಚುನಾವಣೆ ಹಿನ್ನೆಲೆ ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು, ಸುಗಮವಾಗಿ ಸಂಚರಿಸಲು 12,000 ಸಾವಿರ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಶನಿವಾರ(ಅ. 25) ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ದೇಶದ ಹಲವು ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ವಿಡಿಯೋ ಪೋಸ್ಟ್ ಮಾಡಿರುವ ಅವರು, ಇದು ದೀಪಾವಳಿ, ಭಾಯಿ ದೂಜ್, ಛಠ್​ದಂತಹ ಹಬ್ಬದ ತಿಂಗಳು. ಬಿಹಾರದಲ್ಲಿ ಈ ಹಬ್ಬಗಳು ಕೇವಲ ನಂಬಿಕೆಗಿಂತ ಹೆಚ್ಚಿನ ಅರ್ಥವನ್ನು ಹೊಂದಿವೆ. ವಲಸೆ ಹೋಗಿರುವವರು ಮನೆಗೆ ಮರಳುವ ಹಂಬಲ, ಮಣ್ಣಿನ ಪರಿಮಳ ನೋಡುವ, ಕುಟುಂಬದ ಪ್ರೀತಿ, ಹಳ್ಳಿಯ ಉಷ್ಣತೆಯನ್ನು ಒಳಗೊಂಡಿವೆ. ಆದರೆ ಎಲ್ಲಾ ಹಂಬಲವು ಈಗ ಹೋರಾಟವಾಗಿದೆ. ಬಿಹಾರಕ್ಕೆ ಹೋಗುತ್ತಿರುವ ರೈಲುಗಳು ತುಂಬಿ ತುಳುಕುತ್ತಿವೆ, ಟಿಕೆಟ್ ಪಡೆಯುವುದು ಅಸಾದ್ಯ, ಪ್ರಯಾಣವಂತೂ ಅಮಾನವೀಯವಾಗಿದೆ. ಅನೇಕ ರೈಲುಗಳು ಅದರ ಸಾಮರ್ಥ್ಯಕ್ಕಿಂತ 200% ಹೆಚ್ಚಿನ ಜನರನ್ನು ಸಾಗಿಸುತ್ತಿವೆ. ಜನ ಬಾಗಿಲು, ಛಾವಣಿಗಳಲ್ಲಿ ನೇತಾಡುತ್ತಿದ್ದಾರೆ.

ಡಬಲ್ ಇಂಜಿನ್ ಸರ್ಕಾರದ ಹೇಳಿಕೆಗಳು ಸುಳ್ಳು, 12,000 ವಿಶೇಷ ರೈಲುಗಳು ಎಲ್ಲಿವೆ? ಪ್ರತಿ ವರ್ಷವೂ ಪರಿಸ್ಥಿತಿಗಳು ಏಕೆ ಹದಗೆಡುತ್ತಿವೆ? ಬಿಹಾರದ ಜನರು ಪ್ರತಿ ವರ್ಷ ಇಂತಹ ಅವಮಾನಕರ ಪರಿಸ್ಥಿತಿಯಲ್ಲಿ ಮನೆಗೆ ಮರಳಲು ಏಕೆ ಬಯಸುತ್ತಾರೆ? ರಾಜ್ಯದಲ್ಲೇ ಉದ್ಯೋಗ ಮತ್ತು ಗೌರವಾನ್ವಿತ ಜೀವನವಿದ್ದರೆ, ಅವರು ಸಾವಿರಾರು ಕಿಲೋಮೀಟರ್ ದೂರ ಅಲೆದಾಡಬೇಕಾಗಿಲ್ಲ. ಇವರು ಕೇವಲ ಅಸಹಾಯಕ ಪ್ರಯಾಣಿಕರಲ್ಲ, ಎನ್​ಡಿಎ ಸರ್ಕಾರದ ಮೋಸಗೊಳಿಸುವ ನೀತಿಗಳ ಜೀವಂತ ಉದಾಹರಣೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 1 ರಿಂದ ನವೆಂಬರ್ 30 ರವರೆಗೆ 61 ದಿನಗಳ ಅವಧಿಯಲ್ಲಿ ಛತ್ ಪೂಜೆ ಮತ್ತು ಪ್ರಸ್ತುತ ದೀಪಾವಳಿ ಋತುವಿನ ಜನದಟ್ಟಣೆಯನ್ನು ನಿರ್ವಹಿಸಲು ದೇಶಾದ್ಯಂತ 12,000 ಕ್ಕೂ ಹೆಚ್ಚು ವಿಶೇಷ ರೈಲುಗಳ ಕಾರ್ಯನಿರ್ವಹಣೆ ಮಾಡುತ್ತವೆ ಎಂದು ಭಾರತೀಯ ರೈಲ್ವೆ ಅಧಿಕೃತ ಪ್ರಕಟಣೆ ಹೊರಡಿಸಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net