ರಾತ್ರಿ ಮನೆಯಲ್ಲಿ ಮಲಗಿದ್ದ ಮಗಳು ಬೆಳಗ್ಗೆ ಬಾವಿಯಲ್ಲಿ ಶವವಾಗಿ ಪತ್ತೆ! ಆಕೆಗೆ ಏನಾಯಿತೆಂದು ತಿಳಿದರೆ ಬೆಚ್ಚಿ ಬೀಳುತ್ತೀರ

well
Published on

ಉದಯಪುರ: ಮಕ್ಕಳು ದೇವರ ಸಮಾನ ಎನ್ನುತ್ತಾರೆ. ಆದರೆ ಕೆಲವು ಪಾಪಿಗಳು ಆ ಮಕ್ಕಳ ಮೇಲೇ ಹಲ್ಲೆ ನಡೆಸಿ, ಅತ್ಯಾಚಾರ ಮಾಡಿಬಿಡುತ್ತಾರೆ. ಅಮ್ಮನ ಮಡಿಲಲ್ಲಿ ಮಲಗಿದ್ದ ಎಂಟು ವರ್ಷದ ಪುಟ್ಟ ಬಾಲಕಿಯೊಬ್ಬಳು ಇದೇ ರೀತಿಯ ದುಷ್ಕೃತ್ಯದಿಂದಾಗಿ ಶವವಾಗಿರುವ ಘಟನೆ ರಾಜಸ್ಥಾನದ ಪ್ರತಾಪ್​ಗಢ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಮೇಘಾಪುರ ಹಳ್ಳಿಯಲ್ಲಿ ಅಪ್ಪ, ಅಮ್ಮ ಮತ್ತು ಇಬ್ಬರು ಹೆಣ್ಣು ಮಕ್ಕಳ ಮುದ್ದಾದ ಕುಟುಂಬ. ಶುಕ್ರವಾರ ಅಪ್ಪ ಯಾವುದೋ ಕೆಲಸದ ಮೇರೆಗೆ ಬೇರೆ ಊರಿಗೆ ಹೋಗಿದ್ದ. ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಅಕ್ಕ ಪಕ್ಕ ಮಲಗಿಸಿಕೊಂಡು ತಾಯಿ ನಿದ್ರೆಗೆ ಜಾರಿದ್ದಾಳೆ. ಮಕ್ಕಳೊಂದಿಗೆ ನಿದ್ರೆ ಮಾಡಿದ ತಾಯಿ ಬೆಳಗ್ಗೆ ಎದ್ದು ನೋಡಿದಾಗ ತನ್ನ ಪಕ್ಕ ಮಲಗಿದ್ದ ಎಂಟು ವರ್ಷದ ಮಗಳು ಕಾಣೆಯಾಗಿದ್ದಾಳೆ. ಮನೆಯೆಲ್ಲ ಹುಡುಕಿದರೂ ಮಗಳು ಕಾಣಿಸದಿದ್ದಾಗ, ಮಗಳಿಗೆ ಏನೋ ಅಪಾಯವಾಗಿರುವ ಮುನ್ಸೂಚನೆ ತಾಯಿಗೆ ಸಿಕ್ಕಿದೆ. ತಕ್ಷಣ ಗಂಡನಿಗೆ ವಿಚಾರ ತಿಳಿಸಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾತ್ರೋರಾತ್ರಿ ನಾಪತ್ತೆಯಾದ ಮಗಳು ಗ್ರಾಮದ ಬತ್ತಿದ್ದ ಬಾವಿಯಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿ ದೇಹವನ್ನು ಹೊರತಗೆದು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆಯ ಮೇಲೆ ಅತ್ಯಾಚಾರವಾಗಿರುವುದು ದೃಢವಾಗಿದೆ. ಅಮ್ಮ ಮಕ್ಕಳು ಮಲಗಿದ್ದ ಸಮಯದಲ್ಲಿ ಮನೆಗೆ ಬಂದ ಪಾಪಿಗಳು ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಕಾಮದಾಸೆ ತೀರಿದ ನಂತರ ಆಕೆಯನ್ನು ಕೊಂದು ಬಾವಿಗೆ ಎಸೆದಿದ್ದಾರೆ. ಪ್ರಕರಣ ದಾಖಲಾಗಿ ಎರಡು ದಿನದಲ್ಲಿ 50 ಜನ ಶಂಕಿತರನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net