ವಿದ್ಯಾರ್ಥಿನಿಯರಿಗೆ ಮನಬಂದಂತೆ ಥಳಿಸಿದ ಶಿಕ್ಷಕರು: ಒಬ್ಬಳ ಸ್ಥಿತಿ ಚಿಂತಾಜನಕ, ಇನ್ನಿಬ್ಬರು ಆಸ್ಪತ್ರೆಗೆ ದಾಖಲು..

teacher
ಸಾಂದರ್ಭಿಕ ಚಿತ್ರ
Published on

ರಾಂಚಿ: ಶಾಲೆಗೆ ಬರಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕರು ಥಳಿಸಿದ ಪರಿಣಾಮ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಾರ್ಖಂಡ್‌ನಲ್ಲಿ ರಾಂಚಿ ಬಳಿಯಲ್ಲಿ ನಡೆದಿದೆ.

ಘಟನೆಯು ರಾತೂ ಪೊಲೀಸ್ ಠಾಣೆ ವ್ಯಾಪ್ತಿಯ ಗಡಾರಿ ಗೂಡುನಲ್ಲಿರುವ ಕೃಷಕ್ ಪ್ರೌಢಶಾಲೆಯಲ್ಲಿ ನಡೆದಿದ್ದು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಯನ್ನು 10ನೇ ತರಗತಿಯ ಸಾಕ್ಷಿ ಕುಮಾರಿ ಎಂದು ಗುರುತಿಸಲಾಗಿದೆ. ಇದೇ ಶಾಲೆಯ ವಿದ್ಯಾರ್ಥಿಯಾಗಿರುವ ಮನೀಶ್ ಎಂಬಾತನ ಹುಟ್ಟುಹಬ್ಬ ಸೋಮವಾರದಂದು ಇತ್ತು. ಮನೆಯವರ ಅನುಮತಿ ಪಡೆದು 10ನೇ ತರಗತಿಯ ಅಸಿತಾ, 6ನೇ ತರಗತಿಯ ರಿಯಾ ಮತ್ತು ಸಾಕ್ಷಿ ಸೇರಿ ಆತನ ಜೊತೆ ಬರ್ತ್ ಡೇ ಪಾರ್ಟಿಗೆ ತೆರಳಿದ್ದರು.

ಇದನ್ನೂ ಓದಿ: ವರನ ಕೈಯಲ್ಲಿದ್ದ: ತಾಳಿ ಕಸಿದುಕೊಂಡು ದೇವರ ಹುಂಡಿಗೆ ಎಸೆಯಲೆತ್ನಿಸಿದ ವಧು..!

ಈ ಮೂವರು ಶಾಲೆಗೆ ಗೈರು ಹಾಜರಾಗಿದ್ದನ್ನು ಪತ್ತೆ ಹಚ್ಚಿದ ಶಿಕ್ಷಕರು ಮಂಗಳವಾರದಂದು ಮಧ್ಯಾಹ್ನ ವಿದ್ಯಾರ್ಥಿನಿಯರಿಗೆ ದೊಣ್ಣೆಯಿಂದ ನಿರ್ದಯವಾಗಿ ಥಳಿಸಿದ್ದಾರೆ ಎನ್ನಲಾಗಿದೆ. ಶಿಕ್ಷಕರ ಹೊಡೆತದಿಂದ ಮನನೊಂದ ಸಾಕ್ಷಿ ಬುಧವಾರದಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.

ಮತ್ತೊಂದೆಡೆ ಶಿಕ್ಷಕರ ಥಳಿತದಿಂದ ಅಸಿತಾ ಹಾಗೂ ರಿಯಾಳ ಕಾಲು ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಇನ್ನು ಈ ಕುರಿತು, ಶಾಲಾ ಕಾರ್ಯದರ್ಶಿ ಅಶೋಕ್ ಮಹತೋ, ಮುಖ್ಯೋಪಾಧ್ಯಾಯಿನಿ ಸೀಮಾ ಕುಮಾರಿ, ಶಿಕ್ಷಕಿ ನಳಿನಿ ರಂಜನ್ ಮಹತೋ ಮತ್ತು ಶಿಕ್ಷಕಿ ಮೆಲ್ಲಾ ಟಿರ್ಕಿ ವಿರುದ್ಧ ರಾತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net