

Liquor : ಮದ್ಯದ ಅಂಗಡಿಯಲ್ಲಿ ಮದ್ಯ ಖರೀದಿಸಲು ಕ್ಯೂನಲ್ಲಿ ನಿಂತಿದ್ದ ಅಪ್ರಾಪ್ತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಆಕೆಯ ತಂದೆಯನ್ನು ಠಾಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಈ ಘಟನೆ ಕೇರಳದ ಪಾಲಕ್ಕಾಡ್‌ನ ಪಟ್ಟಾಂಬಿಯಲ್ಲಿರುವ ಮದ್ಯದ ಅಂಗಡಿಯಲ್ಲಿ ನಡೆದಿದೆ. ತ್ರಿಥಾಲ ಠಾಣೆಯ ಪೊಲೀಸರು ಆಕೆಯ ತಂದೆಯನ್ನು ಠಾಣೆಗೆ ಬರುವಂತೆ ಸೂಚಿಸಿದ್ದಾರೆ. ಇಂದು ಠಾಣೆಗೆ ಆಗಮಿಸಿ, ವಿಚಾರಣೆ ಎದುರಿಸುವ ಸಾಧ್ಯತೆ ಇದೆ.
ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಬಾಲಕಿಯನ್ನು ಮದ್ಯದ ಅಂಗಡಿಯಲ್ಲಿ ಕ್ಯೂನಲ್ಲಿ ನಿಲ್ಲಿಸಲಾಯಿತು. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದರು.
ಪಟ್ಟಂಬಿಯ ಕರಿಂಪನಕ್ಕಡವ್‌ನಲ್ಲಿರುವ ಮದ್ಯದ ಅಂಗಡಿಯಲ್ಲಿ ಬಾಲಕಿ ಕ್ಯೂನಲ್ಲಿ ನಿಂತಿದ್ದಳು. ಅದನ್ನು ನೋಡಿ ಯಾರೊಬ್ಬರು ಕೂಡ ಆಕೆಯನ್ನು ಪ್ರಶ್ನೆ ಮಾಡಲಿಲ್ಲ. ಆ ಹುಡುಗಿಯ ವಯಸ್ಸು ಹತ್ತು ವರ್ಷ ಎಂದು ತಿಳಿದುಬಂದಿದೆ. ಆಕೆಯನ್ನು ಏಕೆ ಕ್ಯೂನಲ್ಲಿ ನಿಲ್ಲಿಸಲಾಯಿತು ಎಂಬ ಪ್ರಶ್ನೆಗೆ ಉತ್ತರ ಬರಬೇಕಿದೆ. ಬಾಲಕಿಯ ತಂದೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. (ಏಜೆನ್ಸೀಸ್)