

ಬೆಂಗಳೂರು: ಬೆಂಗಳೂರಿನ ಬಾಣಸವಾಡಿಯ ಪಿಳ್ಳಾರೆಡ್ಡಿ ನಗರದಲ್ಲಿ ಶಿಕ್ಷಕಿ ಬೈದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮೃತಾ ಎನ್ನುವ ಹುಡುಗಿ ಟೀಚರ್ ಎಲ್ಲರ ಮುಂದೆ ಬೈದು ಬಿಟ್ಟರು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಾಣಸವಾಡಿಯ ಮರಿಯಮ್ ನಿಲಯ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ ಬಾಲಕಿ ಅಮೃತಾ ಎಲ್ಲಾ ವಿದ್ಯಾರ್ಥಿಗಳ ಮುಂದೆ ಬೈದಿದ್ದಕ್ಕೆ ಮನನೊಂದು ನಿನ್ನೆ ಸಂಜೆ 5.15 ಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನೇಣಿಗೆ ಶರಣಾಗುವ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು ಅದರಲ್ಲಿ 'ಅಮ್ಮಾ ಐ ಆ್ಯಮ್ ಸಾರಿ. ನಾನು ಶಾಲೆಯಲ್ಲಿ ನಡೆದದ್ದನ್ನು ಮರೆಯಲಾರೆ. ನಾನು ಈ ಗಿಲ್ಟ್ನೊಂದಿಗೆ ಬದುಕಲಾರೆ' ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತ್ರದ ಕೊನೆಯಲ್ಲಿ ಐ ಲವ್ ಯೂ ಅಪ್ಪಾ, ಅಮ್ಮಾ ಎಂದು ಅಮೃತಾ ಬರೆದಿದ್ದಾಳೆ.
ರಾಮಮೂರ್ತಿನಗರದ ಪೊಲೀಸ್ ಠಾಣೆಯಲ್ಲಿ ಈಗ ಪ್ರಕರಣ ದಾಖಲಾಗಿದ್ದು ಅಸಹಜ ಸಾವು ಎಂದು ಕೇಸು ದಾಖಲಾಗಿದೆ. ಶಾಲೆ ಅಥವಾ ಶಿಕ್ಷಕರ ವಿರುದ್ಧ ಪೊಲೀಸರು ಯಾವುದೇ ರೀತಿಯ ಪ್ರಕರಣವನ್ನು ದಾಖಲಿಸಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿ ನಂತರ ಅಮೃತಾಳ ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಗಿದೆ.