ರೈಲಿನಲ್ಲಿ 21 ವರ್ಷದ ಯುವತಿಯ ಬರ್ಬರ ಹತ್ಯೆ! ಅಪ್ಪನನ್ನು ಜೈಲಿನಿಂದ ಬಿಡಿಸಲು ಹೊರಟವಳ ಬದುಕೇ ಅಂತ್ಯ

train
Published on

ಭೋಪಾಲ್​: ಯಾವುದೋ ಪ್ರಕರಣದಲ್ಲಿ ಜೈಲು ಸೇರಿದ್ದ ತಂದೆಯನ್ನು ಬಿಡಿಸುವುದಕ್ಕಾಗಿ ಒದ್ದಾಡುತ್ತಿದ್ದ ಮಗಳೊಬ್ಬಳು ರೈಲಿನಲ್ಲೇ ಬರ್ಬವರಾಗಿ ಹತ್ಯೆಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಅಪರಿಚಿತರು ಯುವತಿಯ ಕೊಲೆ ಮಾಡಿರುವುದಾಗಿ ಹೇಳಲಾಗಿದೆ.

21 ವರ್ಷದ ಆ ಯುವತಿಯ ತಂದೆ ಜೈಲಿನಲ್ಲಿದ್ದಾನೆ. ಆತನಿಗೆ ಬೇಲ್​ ಕೊಡಿಸಲೆಂದು ಆಕೆ ಸಾಹಸ ಮಾಡುತ್ತಿದ್ದಳು. ಜಿಲ್ಲಾ ನ್ಯಾಯಾಲದಯಲ್ಲಿ ಜಾಮೀನು ಅರ್ಜಿಯನ್ನೂ ಸಲ್ಲಿಸಲಾಗಿತ್ತು. ಈ ಮಧ್ಯೆ ಬಿಹಾರದಲ್ಲಿ ವಾಸವಿರುವ ಅಣ್ಣನನ್ನು ನೋಡಲೆಂದು ಯುವತಿ ಇಂಡೋರ್​ನಿಂದ ನರ್ಮದಾ ಎಕ್ಸ್​ಪ್ರೆಸ್​ ರೈಲಿನಲ್ಲಿ ಹೊರಟಿದ್ದಾಳೆ. ಸ್ಲೀಪರ್​ ಕೋಚ್​ನಲ್ಲಿ ಸಾಗುತ್ತಿದ್ದ ಯುವತಿ ಸೆಹೋರ್​ ರೈಲ್ವೆ ನಿಲ್ದಾಣ ತಲುಪುವುದರೊಳಗೆ ಹೆಣವಾಗಿದ್ದಾಳೆ.

ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಯುವತಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಂದ ಹಾಗೆ ಯುವತಿ ರೈಲು ಹತ್ತಿದಾಗಿನಿಂದ ಅಣ್ಣನ ಸಂಪರ್ಕದಲ್ಲಿದ್ದಳು. ರೈಲಿನಲ್ಲಿ ಯಾರೋ ತನಗೆ ಹಿಂಸೆ ಕೊಡುತ್ತಿರುವುದಾಗಿಯೂ ಹೇಳಿಕೊಂಡಿದ್ದಾಳೆ. ಆ ವಿಚಾರವಾಗಿ ಆಕೆಯ ಅಣ್ಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅದನ್ನು ಪರಿಶೀಲನೆ ಮಾಡಲು ಬಂದ ಪೊಲೀಸರಿಗೆ ಯುವತಿಯ ಹೆಣ ಸಿಕ್ಕಿದೆ.

ಸೆಹೋರ್​ ರೈಲ್ವೆ ನಿಲ್ದಾಣಕ್ಕೆ ತಲುಪಲು ಕೆಲ ನಿಮಿಷಗಳ ಮೊದಲು ಕೊಲೆ ನಡೆದಿರುವುದಾಗಿ ಹೇಳಲಾಗಿದೆ. ಬೋಗಿಯಲ್ಲಿ ಸೀಟಿನ ವಿಚಾರಕ್ಕೆ ಯಾರೋ ಜಗಳ ಮಾಡಿಕೊಳ್ಳುತ್ತಿದ್ದರು ಎಂದು ಅದೇ ಬೋಗಿಯಲ್ಲಿದ್ದ ಪ್ರಯಾಣಿಕರು ತಿಳಿಸಿದ್ದಾರೆ. ಚೂಪಾದ ವಸ್ತುವಿನಿಂದ ಯುವತಿಗೆ ಚುಚ್ಚಿರುವ ಆರೋಪಿಗಳು ಪರಾರಿಯಾಗಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಓರ್ವನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net