

ಮಡಿಕೇರಿ: ಶಾಲಾ ಬಸ್ ಹತ್ತಲು ನಡೆದು ಬರುತ್ತಿದ್ದ ಸಂದರ್ಭ ಹುಲಿ ಕಂಡು ಹೆದರಿದ ವಿದ್ಯಾರ್ಥಿನಿ ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆ ಸೇರಿದ್ದಾಳೆ.
ಪೇರ್ಮಾಡ್ ಗ್ರಾಮದ ಕಾಫಿ ಬೆಳೆಗಾರ ಕೇಚಮಾಡ ಉಮೇಶ್ ಮತ್ತು ನಮಿತಾ ದಂಪತಿ ಪುತ್ರಿ ರಕ್ಷಾ (16) ಪ್ರಜ್ಞಾಹೀನ ಸ್ಥಿತಿಯಲ್ಲಿರುವ ವಿದ್ಯಾರ್ಥಿನಿ.
ಅರ್ವತೋಕ್ಲು ಗ್ರಾಮದಲ್ಲಿರುವ ಸರ್ವಧೈವತಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿರುವ ರಕ್ಷಾ ಪೊನ್ನಂಪೇಟೆ ಸಮೀಪದ ಅವರ ಸಂಬಂದಿ ಮತ್ತೂರು ಗ್ರಾಮದ ಗಾಣಂಗಡ ಉಮೇಶ್ ಅವರ ಮನೆಯಿಂದ ಕಾಲೇಜಿಗೆ ಬರುತ್ತಿದ್ದರು. ಸೋಮವಾರ ಬೆಳಗ್ಗೆ 7.45 ಗಂಟೆ ಸುಮಾರಿಗೆ ಒಬ್ಬಳೆ ನಡೆದುಕೊಂಡು ಬರುತ್ತಿದ್ದಾಗ ದಾರಿ ಮದ್ಯೆ ಕಾಫಿ ತೋಟದಿಂದ ಹುಲಿ ರಸ್ತೆ ದಾಟಿದೆ. ಅತೀ ಸಮೀಪದಲ್ಲಿ ಕಂಡಿರುವುದರಿಂದ ಹೆದರಿ, ಹಿಂದಕ್ಕೆ ಓಡಿದ್ದಾಳೆ. ಆದರೂ ಮನೆಗೆ ತಲುಪಲಾಗದೆ ರಸ್ತೆ ಮದ್ಯದಲ್ಲಿ ಕುಸಿದು ಬಿದ್ದ ಘಟನೆ ನಡೆದಿದೆ.
ಹೆಚ್ಚಿನ ಚಿಕಿತ್ಸೆಗೆ ಮೈಸೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಘಟನೆ ನಡೆದು 4 ಗಂಟೆ ಕಳೆದರೂ ಕೂಡ ವಿದ್ಯಾರ್ಥಿನಿ ಪ್ರಜ್ಞೆಗೆ ಮರಳಲಿಲ್ಲ. ಬೆಳಗ್ಗೆ 10.30 ಗಂಟೆ ಸುಮಾರಿಗೆ ಪಾಲಕರು ಆಸ್ಪತ್ರೆಗೆ ಬಂದರೂ ಕೂಡ ಪಾಲಕರನ್ನು ಗುರುತಿಸದೆ ಇರುವುದು ಆತಂಕ ಮೂಡಿಸಿದೆ. ನಂತರ ಗ್ರಾಮದಲ್ಲಿ ಯಾರಿಗೂ ಕೂಡ ಹುಲಿ ಕಾಣಿಸಿಕೊಳ್ಳಲಿಲ್ಲ. ಗ್ರಾಮದಲ್ಲಿ ಜಾನುವಾರಗಳ ಮೇಲೆ ಕೂಡ ದಾಳಿ ನಡೆಯದೇ ಇರುವುದು ನಿಟ್ಟುಸಿರು ಬಿಡುವಂತಾಗಿದೆ. ಪೊನ್ನಂಪೇಟೆ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರೀಶೀಲನೆ ನಡೆಸಿದೆ.